ಉಗ್ರ ಅಬು ದುಜಾನಾ ಮೃತ ದೇಹ ಕೊಂಡೊಯ್ಯುವಂತೆ ಪಾಕ್ ಹೈ ಕಮಿಷನ್'ಗೆ ಭಾರತ ಸೂಚನೆ

ಪುಲ್ವಾಮದಲ್ಲಿ ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಅಬು ದುಜಾನಾ ಮೃತದೇಹವನ್ನು ಸ್ವೀಕರಿಸುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ...
ಅಬು ದುಜಾನಾ
ಅಬು ದುಜಾನಾ
ಶ್ರೀನಗರ: ಪುಲ್ವಾಮದಲ್ಲಿ ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಅಬು ದುಜಾನಾ ಮೃತದೇಹವನ್ನು ಕೊಂಡೊಯ್ಯುವಂತೆ ಪಾಕಿಸ್ತಾನಕ್ಕೆ ಭಾರತ ಗುರುವಾರ ತಿಳಿಸಿದೆ.
ಇದೇಮೊದಲ ಬಾರಿಗೆ ಉಗ್ರನ ಮೃತದೇಹವನ್ನು ಕೊಂಡೊಯ್ಯುವಂತೆ ಭಾರತ ಪಾಕಿಸ್ತಾನಕ್ಕೆ ತಿಳಿಸಿದೆ. ಉಗ್ರರ ವಿರುದ್ಧ ಸೇನಾ ಪಡೆ ಕಾರ್ಯಾಚರಣೆ ನಡೆಸಿದಾಗಲೆಲ್ಲಾ ಪಾಕಿಸ್ತಾನ ಮಾತ್ರ ಉಗ್ರರು ನಮ್ಮವರಲ್ಲ...ನಮ್ಮವರಲ್ಲ... ಎನ್ನುತ್ತಲೇ ಬರುತ್ತಿದೆ. ಇದೀಗ ಪಾಕಿಸ್ತಾನದ ಮುಖವಾಡ ಅಬು ದುಜಾನ್ ವಿಚಾರದಲ್ಲಿ ಕಳಚಿ ಬಿದ್ದಿದೆ. 
ಇದೇ ಮೊದಲ ಬಾರಿಗೆ ಪಾಕಿಸ್ತಾನ ಮೂಲದವನಾಗಿರುವ ಉಗ್ರನೊಬ್ಬನ ಮೃತದೇಹವನ್ನು ಸ್ವೀಕರಿಸುವಂತೆ ಭಾರತದ ಅಧಿಕಾರಿಗಳು ನೇರವಾಗಿ ಪಾಕಿಸ್ತಾನ ರಾಯಭಾರಿಗಳಿಗೆ ತಿಳಿಸಿದ್ದಾರೆ. 
ಉಗ್ರ ಅಬು ದುಜಾನಾ ಹತ್ಯೆ ಕುರಿತಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಾಶ್ಮೀರ ಐಜಿಪಿ ಮುನೀರ್ ಖಾನ್ ಅವರು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಿನ್ನೆ ನಡೆಸಲಾದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲಕ ಅಬು ದುಜಾನಾನನ್ನು ಹತ್ಯೆ ಮಾಡಲಾಗಿತ್ತು. ಅಬು ದುಜಾನಾ ಗಿಲ್ಗಿಟ್-ಬಲ್ಟಿಸ್ತಾನ್'ಗೆ ಸೇರಿದವನಾಗಿದ್ದಾನೆ. ಹೀಗಾಗಿ ಈತನ ಶವವನ್ನು ತಮ್ಮದೆಂದು ಘೋಷಿಸಿ ಮೃತದೇಹವನ್ನು ತೆಗೆದುಕೊಂಡು  ಹೋಗುವಂತೆ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. 
ಉಗ್ರನ ಪೋಷಕರು ಆತನ ಅಂತಿನ ದರ್ಶನವನ್ನು ಪಡೆದುಕೊಳ್ಳಲಿ ಎಂಬ ಉದ್ದೇಶದಿಂದಾಗಿ ಮೃತದೇಹ ಪಡೆದುಕೊಳ್ಳುವಂತೆ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಒಂದು ವೇಳೆ ಪಾಕಿಸ್ತಾನ ಮೃತದೇಹವನ್ನು ಸ್ವೀಕರಿಸದೇ ಹೋದಲ್ಲಿ, ನಾವೇ ಸಮಾಧಿ ಮಾಡುತ್ತೇವೆಂದು. ಕಾಶ್ಮೀರಕ್ಕೆ ಸಂಬಂಧಪಟ್ಟಿರದ ಸ್ಥಳೀಯರ ಕೈಗೆ ಮೃತದೇಹ ನೀಡಲು ಸಾಧ್ಯವಿಲ್ಲ ಹೀಗಾಗಿ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದ್ದಾರೆ. 
ಅಬು ದುಜಾನ್ ನನ್ನು ಬಂಧನಕ್ಕೊಳಪಡಿಸಲು ಭಾರತದ ಅಧಿಕಾರಿಗಳು ಹಲವಾರು ತಿಂಗಳುಗಳಿಂದ ಪ್ರಯತ್ನ ನಡೆಸುತ್ತಲೇ ಇದ್ದರು. ಚಾಲಾಕಿಯಾಗಿದ್ದ ಅಬು ದುಜಾನ್ ಒಂದಲ್ಲ ಒಂದು ರೀತಿಯಲ್ಲಿ ತಪ್ಪಿಸಿಕೊಳ್ಳುತ್ತಲೇ ಇದ್ದ. ನಿನ್ನೆ ತನ್ನ ಪತ್ನಿಯನ್ನು ನೋಡುವ ಸಲುವಾಗಿ ಆತ ಕಾಶ್ಮೀರದ ಮನೆಯೊಂದಕ್ಕೆ ಬಂದಿದ್ದ. ಈ ವೇಳೆ ಎನ್ ಕೌಂಟರ್ ನಡೆಸಿದ್ದ ಸೇನಾ ಪಡೆ ಅಬು ದುಜಾನಾನನ್ನು ಹತ್ಯೆ ಮಾಡಿತ್ತು. 
ಹತ್ಯೆಯಾಗಿರುವ ಅಬು ದುಜಾನಾ ಸಿಆರ್'ಪಿಎಫ್ ಪಡೆಯ ಮೇಲೆ ದಾಳಿ ನಡೆಸಿ 8 ಮಂದಿಯನ್ನು ಹತ್ಯೆ ಮಾಡಿದ್ದ. ಈ ಪ್ರಕರಣ ಸೇರಿದಂದೆ ಹಲವಾರು ಪ್ರಕರಣಗಳಲ್ಲಿ ಈತ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com