ಭಾರತವನ್ನು ಶತ್ರುವನ್ನಾಗಿಸಿಕೊಂಡರೆ ಜೀವಸೆಲೆಗೇ ಕುತ್ತು: ಚೀನಾಗೆ ತಜ್ಞರ ಎಚ್ಚರಿಕೆ

ಭಾರತವನ್ನು ಶತ್ರುವನ್ನಾಗಿರಿಸಿಕೊಂಡರೆ ಜೀವಸೆಲೆಗೇ ಕುತ್ತು ಎದುರಾಗಲಿದೆ ಎಂದು ಚೀನಾಗೆ ಅಲ್ಲಿನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
ಪ್ರಧಾನಿ ನರೇಂದ್ರ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
ಬೀಜಿಂಗ್: ಭಾರತವನ್ನು ಶತ್ರುವನ್ನಾಗಿರಿಸಿಕೊಂಡರೆ ಜೀವಸೆಲೆಗೇ ಕುತ್ತು ಎದುರಾಗಲಿದೆ ಎಂದು ಚೀನಾಗೆ ಅಲ್ಲಿನ ತಜ್ಞರು ಎಚ್ಚರಿಕೆ ನೀಡಿದ್ದಾರೆ. 
ಚೀನಾ ಮಾನಸಿಕ ಯುದ್ಧ ನಡೆಸುತ್ತಿದೆ. ಒಂದು ವೇಳೆ ಚೀನಾ ಭಾರತವನ್ನು ರಣರಂಗದ ಯುದ್ಧದಲ್ಲಿ ಸೋಲಿಸಬಹುದು ಆದರೆ ಭಾರತದ ಕಡಲ ಶಕ್ತಿಯನ್ನು ನಿಯಂತ್ರಿಸುವುದು ಚೀನಾಗೆ ಸಾಧ್ಯವಾಗುವುದಿಲ್ಲ, ಚೀನಾ ಈಗ ನಡೆಸುತ್ತಿರುವ ಮಾನಸಿಕ ಯುದ್ಧ ಅಂತಿಮವಾಗಿ ಭಾರತವನ್ನು ಶತ್ರುವನ್ನಾಗಿಸಬಹುದು ಎಂದು ಮಕಾವು-ಮೂಲದ ಸೇನಾ ತಜ್ಞ ಆಂಥೋನಿ ವಾಂಗ್ ಡಾಂಗ್ ಚೀನಾಗೆ ಎಚ್ಚರಿಕೆ ನೀಡಿದ್ದಾರೆ. 
ಹಿಂದೂ ಮಹಾಸಾಗರ ಚೀನಾದ ವಾಣಿಜ್ಯ ವ್ಯವಹಾರಗಳ ಜೀವಸೆಲೆಯಾಗಿದೆ. ತೈಲ ಆಮದಿನ ಮೇಲೆ ಚೀನಾ ಅತಿ ಹೆಚ್ಚು ಅವಲಂಬಿತವಾಗಿದ್ದು ಶೇ.80 ರಷ್ಟು ತೈಲ ಆಮದು ಚೀನಾಗೆ ಹಿಂದೂ ಮಹಾಸಾಗರದ ಮೂಲಕವೇ ತಲುಪುತ್ತದೆ. ಆಗ್ನೇಯ ಏಷ್ಯಾದ ಇತರ ದೇಶಗಳಂತೆ ಚೀನಾದ ತಂತ್ರಗಳಿಗೆ ಭಾರತ ತುತ್ತಾಗಿಲ್ಲ, ಚೀನಾದ ಇಂಧನ ಜೀವಸೆಲೆ ಹಾಗೂ ಬೆಲ್ಟ್ ಆಂಡ್ ರೋಡ್ ಯೋಜನೆಯ ಹೃದಯಭಾಗದ ಆಯಕಟ್ಟಿನ ಪ್ರದೇಶದಲ್ಲಿ ಭಾರತವಿದೆ. ಭಾರತದೊಂದಿಗೆ ಆಕ್ಷೇಪಕ್ಕೊಳಗಾದರೆ ಶತ್ರುವನ್ನು ಸೃಷ್ಟಿಸಿಕೊಂಡಂತಾಗಿ ಚೀನಾದ ಜೀವಸೆಲೆಗೇ ಕುತ್ತು ಎದುರಾಗಲಿದೆ ಎಂದು ತಜ್ಞ ಆಂಥೋನಿ ವಾಂಗ್ ಡಾಂಗ್ ಚೀನಾಗೆ ಎಚ್ಚರಿಕೆ ನೀಡಿದ್ದಾರೆ. 
ಇನ್ನು ಚೀನಾದ ದಕ್ಷಿಣ ಏಷ್ಯಾ ಅಧ್ಯಯನ ಒಕ್ಕೂಟದ ಸಲಹೆಗಾರ ಸನ್ ಶೈಹೈ ಸಹ ಇಂಥಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯುದ್ಧದ ನೆಪದಲ್ಲಿ ಭಾರತವನ್ನು ಶತ್ರುವನ್ನಾಗಿರಿಸಿಕೊಂಡರೆ ಚೀನಾಗೆ ಹೆಚ್ಚು ತೊಂದರೆ ಎಂದು ಹೇಳಿದ್ದಾರೆ. ಗಡಿ ವಿವಾದವನ್ನು ಚೀನಾ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಒಬಿಒಆರ್ ಮೂಲಕ ಏಷ್ಯಾ-ಪೆಸಿಫಿಕ್ ಪ್ರಾಂತ್ಯದ ಹೊರತಾಗಿ ತನ್ನ ರಾಜತಾಂತ್ರಿಕ ಆರ್ಥಿಕ ಪ್ರಭಾವ ಬೀರುವ ಚೀನಾದ ಯೋಜನೆಗೆ ದೀರ್ಘಾವಧಿಯ ಪರಿಣಾಮಗಳು ಉಂಟಾಗಲಿವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com