
ನವದೆಹಲಿ: ದೆಹಲಿಯಲ್ಲಿರುವ ಅಮೆರಿಕ ರಾಯಭಾರಿಯೊಬ್ಬರ ಸೀರೆ ಶೋಧ ಭಾರತೀಯರ ಮನಗೆದಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಮೆರಿಕ ರಾಯಭಾರಿ ಮೇರಿಕೇ ಕಾರ್ಲಸನ್ ಅವರ ಸ್ಯಾರಿಸರ್ಚ್ ಹ್ಯಾಶ್ ಟ್ಯಾಗ್ ವೈರಲ್ ಆಗಿದೆ.
ಆಗಸ್ಟ್ 15ರಂದು ಅಂದರೆ ಇಂದು ದೆಹಲಿ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಮೆರಿಕ ರಾಯಭಾರಿ ಮೇರಿಕೇ ಕಾರ್ಲಸನ್ ಅತಿಥಿಯಾಗಿ ಆಗಮಿಸಬೇಕಿತ್ತು. ಹೀಗಾಗಿ ಅವರು ಒಂದು ವಾರ ಮುಂಚಿತವಾಗಿಯೇ ಈ ವಿಶೇಷ ಕಾರ್ಯಕ್ರಮಕ್ಕೆ ಸಿದ್ಧರಾಗ ತೊಡಗಿದ್ದರು. ಕಾರ್ಯಕ್ರಮಕ್ಕೆ ಭಾರತೀಯ ಸಂಪ್ರದಾಯದ ಸೀರೆ ಉಡಲು ನಿಶ್ಚಯಿಸಿದ್ದ ಮೇರಿಕೇ ಕಾರ್ಲಸನ್ ಅವರಿಗೆ ಯಾವ ಸೀರೆ ಮಾದರಿ ಆಯ್ಕೆ ಮಾಡಿಕೊಳ್ಳುವುದು ಎಂಬುದು ಗೊಂದಲವಾಗಿತ್ತು.
ಅಂತಿಮವಾಗಿ ನಾಲ್ಕು ಬಗೆಯ ಸೀರೆ ಮಾದರಿಗಳನ್ನು ಆಯ್ಕೆ ಮಾಡಿದ ಮೇರಿಕೇ ಕಾರ್ಲಸನ್ ಅವುಗಳಲ್ಲಿ ಯಾವ ಸೀರೆಯನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಉಡಬೇಕು ಎಂಬ ವಿಚಾರವಾಗಿ ಮತ್ತೆ ಗೊಂದಲಕ್ಕೀಡಾದರು. ಅಂತಿಮವಾಗಿ ತಮ್ಮ ಗೊಂದಲ ನಿವಾರಣೆಗೆ ಸಾಮಾಜಿಕ ಜಾಣ ಟ್ವಿಟರ್ ಮೊರೆ ಹೋದ ಅಮೆರಿಕ ರಾಯಭಾರಿ ಮೇರಿಕೇ ಕಾರ್ಲಸನ್ ಅವರು #SareeSearch (ಸೀರೆ ಶೋಧ) ಹ್ಯಾಶ್ ಟ್ಯಾಗ್ ರಚಿಸಿ ತಮ್ಮನ್ನು ಫಾಲೋ ಮಾಡುತ್ತಿರುವ ಭಾರತೀಯರಿಗೆ ಸೀರೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಅದರಂತೆ ಜಮ್ದಾನಿ, ಕಾಂಜೀವರಮ್, ತುಸ್ಸಾರ್ ಮತ್ತು ಡ್ಯುಪಿಯಾನ್ ಸಿಲ್ಕ್ಸ್ ಸೀರೆಗಳನ್ನು ಉಟ್ಟು ಅವುಗಳ ಫೋಟೋ ಗಳನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದರು. ಮೆರಿಕೇ ಕಾರ್ಲಸನ್ ಅವರ ಈ ಸೀರೆ ಶೋಧಕ್ಕೆ ಭಾರತೀಯರಿಂದ ವ್ಯಾಪಕ ಪ್ರತಿಕ್ರಿಯೆ ಬಂದಿದ್ದು, ಅಂತಿಮವಾಗಿ ಮೆರಿಕೇ ಕಾರ್ಲಸನ್ ಅವರು ಸೀರೆ ಶೋಧಕ್ಕೆ ಭಾರತೀಯರು ವೋಟ್ ಮಾಡುವ ಮೂಲಕ ನೆರವಾಗಿದ್ದಾರೆ.
ವೋಟಿಂಗ್ ನಲ್ಲಿ ಗೆದ್ದ ಕಾಂಜೀವರಮ್ ಸೀರೆ!
ಇನ್ನು ಅಮೆರಿಕ ರಾಯಭಾರಿ ಮೇರಿಕೇ ಕಾರ್ಲಸನ್ ಅವರ ಸ್ಯಾರಿ ಸರ್ಚ್ ವೋಟಿಂಗ್ ನಲ್ಲಿ ತಮಿಳುನಾಡು ಮೂಲದ ಕಾಂಜೀವರಮ್ ಸೀರೆಗೆ ಅತೀ ಹೆಚ್ಚು ವೋಟ್ ಗಳು ಬಂದಿದ್ದು, ಅತೀ ಹೆಚ್ಚು ಜನ ಈ ಮಾದರಿಯ ಸೀರೆಯನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಇದಲ್ಲದೆ ಸ್ವಾತಂತ್ರ್ಯ ದಿನ ಇದೇ ಸೀರೆಯನ್ನು ಉಡುವಂತೆ ಮೆರಿಕೇ ಕಾರ್ಲಸನ್ ಅವರಿಗೆ ಸಲಹೆ ನೀಡಿದ್ದಾರೆ. ಅದರಂತೆ ಟ್ವೀಟಿಗರ ತೀರ್ಪಿನಂತೆ ಮೆರಿಕೇ ಕಾರ್ಲಸನ್ ಅವರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಜಿವರಮ್ ಸೀರೆಯನ್ನು ಉಟ್ಟು ಹೋಗುವುದಾಗಿ ಪ್ರಕಟಿಸಿದ್ದಾರೆ.
ಅಮೆರಿಕ ರಾಯಭಾರಿ ಮೇರಿಕೇ ಕಾರ್ಲಸನ್ ಈ ಟ್ವೀಟ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೇರಿಕೇ ಕಾರ್ಲಸನ್ ಅವರ ಸ್ಯಾರಿ ಸರ್ಚ್ ನ ಚಿತ್ರಣ ಇಲ್ಲಿದೆ.
Advertisement