ಗೋರಕ್ ಪುರ ಆಸ್ಪತ್ರೆ ಮಕ್ಕಳ ಸಾವಿಗೆ ಆಕ್ಸಿಜನ್ ಕೊರತೆ ಕಾರಣ; ಇಬ್ಬರು ವೈದ್ಯರು ಹೊಣೆ: ವರದಿ

ಕಳೆದ ವಾರ ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ದುರಂತಕ್ಕೆ ಸಂಬಂಧಿಸಿದಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಕಳೆದ ವಾರ ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಮಕ್ಕಳ ಮರಣ ಮೃದಂಗ ಭಾರಿಸಿದ್ದ ದುರಂತಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ತಮ್ಮ ಪ್ರಾಥಮಿಕ ವರದಿಯನ್ನು ಜಿಲ್ಲಾ  ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದ್ದು, ವರದಿಯಲ್ಲಿ ದುರಂತಕ್ಕೆ ಹಿರಿಯ ವೈದ್ಯರ ನಿರ್ಲಕ್ಷ್ಯ ಮತ್ತು ಸಮನ್ವಯ ಕೊರತೆಯೇ ಕಾರಣ ಎಂದು ಆರೋಪಿಸಿದ್ದಾರೆ.

ಈ ವರೆಗೂ ಸುಮಾರು 71 ಮಕ್ಕಳ ಸಾವಿಗೆ ಕಾರಣವಾಗಿರುವ ಬಿಆರ್ ಡಿ ಆಸ್ಪತ್ರೆ ದುರಂತ ಸಂಬಂಧ ಉತ್ತರ ಪ್ರದೇಶ ಸರ್ಕಾರ ಕಳೆದ ವಾರ ತನಿಖೆಗೆ ಆದೇಶಿಸಿತ್ತು. ಇದೀಗ ತನಿಖೆಯ ಪ್ರಾಥಮಿಕ ಹಂತ ಮುಕ್ತಾಯವಾಗಿದ್ದು, ನಿನ್ನೆ  ಸಂಜೆ ಅಧಿಕಾರಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ರಾಜೀವ್ ರೌಟಾಲಾ ಅವರಿಗೆ ಪ್ರಕರಣ ಪ್ರಾಥಮಿಕ ವರದಿಯನ್ನು ನೀಡಿದ್ದು, ವರದಿಯಲ್ಲಿ ಮಕ್ಕಳ ಸಾವಿನ ದುರಂತಕ್ಕೆ ಹಿರಿಯ ವೈದ್ಯರ ನಿರ್ಲಕ್ಷ್ಯ ಮತ್ತು ಸಮನ್ವಯ  ಕೊರತೆಯೇ ಕಾರಣ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ರಾಜೀವ್ ರೌಟಾಲಾ ಅವರು ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ತನಿಖಾಧಿಕಾರಿಗಳು ಸಲ್ಲಿಕೆ ಮಾಡಿರುವ ವರದಿಯ ಅನ್ವಯ, ಬಿಆರ್ ಡಿ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಅನಸ್ಥೇಶಿಯಾ ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕುಮಾರ್ ಅವರು ಆಸ್ಪತ್ರೆಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಗಳ  ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.ದುರಂತ ನಡೆಯುವ ಒಂದು ವಾರದ ಮುಂಚಿತವಾಗಿಯೇ ಆಕ್ಸಿಜನ್ ಕೊರತೆ ವಿಚಾರ ಇವರಿಗೆ ತಿಳಿದಿತ್ತು., ಹೀಗಾಗಿ ದುರಂತಕ್ಕೆ ಇವರು ಪ್ರಮುಖ ಕಾರಣರಾಗುತ್ತಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್  ಸಮಸ್ಯೆ ಬಿಗಡಾಯಿಸಿದ್ದಾಗಲೇ ವೈದ್ಯ ಸತೀಶ್ ಕುಮಾರ್ ಕೆಲಸದ ನಿಮಿತ್ತ ಮುಂಬೈಗೆ ಹಾರಿದ್ದರು. ಹೀಗಾಗಿ ತಮ್ಮ ಜವಾಬ್ದಾರಿ ಮರೆತ ಇವರೇ ದುರಂತಕ್ಕೆ ಪ್ರಮುಖ ಕಾರಣರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಂತೆಯೇ ಆಸ್ಪತ್ರೆಯ ಪ್ರಾಶುಪಾಲರಾದ ಮತ್ತು ಇತ್ತೀಚೆಗೆ ಅಮಾನತ್ತಾದ ಆಸ್ಪತ್ರೆಯ ನಿರ್ದೇಶಕ ರಾಜೀವ್ ಮಿಶ್ರಾ ಅವರೂ ಕೂಡ ದುರಂತಕ್ಕೆ ಮತ್ತೋರ್ವ ಕಾರಣರಾಗಿದ್ದು, ಆಸ್ಪತ್ರೆಯ ಮುಖ್ಯಸ್ಥರಾಗಿದ್ದುಕೊಂಡೂ ಕೂಡ ಇವರು  ಆಸ್ಪತ್ರೆಯ ಬೇಕು-ಬೇಡಗಳ ಬಗ್ಗೆ ಗಮನ ನೀಡಿರಲಿಲ್ಲ. ಅಂತೆಯೇ ಇವರ ನಿರ್ಲಕ್ಷ್ಯಜದಿಂದಾಗಿಯೇ ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಹಣ ಪಾವತಿ ತಡವಾಗಿತ್ತು. ಇವರೂ ಕೂಡ ದುರಂತಕ್ಕೆ ಪ್ರಮುಖ ಕಾರಣರಾಗುತ್ತಾರೆ ಎಂದು  ವರದಿಯಲ್ಲಿ ಹೇಳಲಾಗಿದೆ.

ಡಾ.ಕಫೀಲ್ ಖಾನ್
ಪ್ರಕರಣದಲ್ಲಿ ಅಧಿಕಾರಿಗಳು ಮೂರನೇ ಆರೋಪಿ ಎಂದು ಡಾ.ಕಫೀಲ್ ಖಾನ್ ಅವರನ್ನು ಗುರುತಿಸಿದ್ದು, ಅಂದು ದುರಂತ ನಡೆದ ಸಂದರ್ಭದಲ್ಲಿ ಮಕ್ಕಳ ವಿಭಾಗದ ಮುಖಸ್ಥ ಕಫೀಲ್ ಖಾನ್ ಆಸ್ಪತ್ರೆಯ ಮೇಲುಸ್ತುವಾರಿ  ನೋಡಿಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ವಿಚಾರ ಇವರಿಗೂ ತಿಳಿದಿತ್ತು. ಇದಾಗ್ಯೂ ಈ ವಿಚಾರವನ್ನು ಪರಿಣಾಮಕಾರಿಯಾಗಿ ಹಿರಿಯ ವೈದ್ಯರಿಗೆ ಇವರು ತಿಳಿಸಲಿಲ್ಲ. ಆಸ್ಪತ್ರೆಯ ಉನ್ನತ ಹುದ್ದೆಯಲ್ಲಿರುವ ಈ ನಾಲ್ಕೂ  ವೈದ್ಯರ ನಡುವಿನ ಸಮನ್ವಯ ಕೊರತೆಯಿಂದಾಗಿಯೇ ದುರಂತ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ತಮ್ಮ ಪ್ರಥಾಮಿಕ ವರದಿಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com