ಗುಜರಾತ್'ನಲ್ಲಿ ಮುಂದುವರೆದ 'ಕೈ' ಸಂಕಷ್ಟ: 2 ಕಾಂಗ್ರೆಸ್ ಮಾಜಿ ಶಾಸಕರು ಬಿಜೆಪಿಗೆ ಸೇರ್ಪಡೆ
ಕೆಲ ದಿನಗಳ ಹಿಂದಷ್ಟೇ ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರು ಕಾಂಗ್ರೆಸ್ ಮಾಜಿ ಶಾಸಕರು...
ಅಹಮದಾಬಾದ್: ಕೆಲ ದಿನಗಳ ಹಿಂದಷ್ಟೇ ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರು ಕಾಂಗ್ರೆಸ್ ಮಾಜಿ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಗೋದ್ರಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಿ.ಕೆ. ರೌಲಿಜಿ ಹಾಗೂ ಉತ್ತ ಜಮ್ನಗರದ ಮಾಜಿ ಶಾಸಕ ಧರ್ಮೇಂದ್ರಸಿನ್ಹ್ ಜಡೆಜಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಿನ್ನೆ ಗೋದ್ರಾ ಕ್ಷೇತ್ರದಲ್ಲಿ ಬಿಜೆಪಿ ನಡೆಸಿದ್ದ ಕಾರ್ಯಕ್ರಮದಲ್ಲಿ ಸಿ.ಕೆ ರೌಲಿಜಿ ಹಾಗೂ ಧರ್ಮೇಂದ್ರಸಿನ್ಹ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ರುಪಾನಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಜಿತುಭಾಯ್ ವಘಾನಿಯವರು ಹಾಜರಿದ್ದರು.
ಆಗಸ್ಟ್ 21 ರಂದು ಮಾತನಾಡಿದ್ದ ವಿಜಯ್ ರುಪಾನಿಯವರು, ಆಗಸ್ಟ್ 8 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಹ್ಮದ್ ಪಟೇಲ್ ವಿರುದ್ಧ ಮತ ಹಾಕಿದ್ದ ಕಾಂಗ್ರೆಸ್ ಮಾಜಿ ಶಾಸಕರು ಶೀಘ್ರದಲ್ಲಿಯೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಿದ್ದರು.