ಪಂಚಕುಲ ಕೋರ್ಟ್ ಆವರಣ ಪ್ರಕ್ಷುಬ್ಧ: 45 ನಿಮಿಷದಲ್ಲಿ 56 ಹಿಂಸಾಚಾರ ಪ್ರಕರಣ

ದೇವಮಾನವ ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣ ತೀರ್ಪು ಹೊರ ಬಿದ್ದ ಕೇವಲ 45 ನಿಮಿಷದಲ್ಲೇ ಸಿಬಿಐ ವಿಶೇಷ ಕೋರ್ಟ್ ಇರುವ ಪಂಚಕುಲ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, 56 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಹಿಂಸಾಚಾರದಲ್ಲಿ ಗಾಯಗೊಂಡ ಕ್ಯಾಮೆರಾಮನ್
ಹಿಂಸಾಚಾರದಲ್ಲಿ ಗಾಯಗೊಂಡ ಕ್ಯಾಮೆರಾಮನ್
Updated on: 

ಚಂಡೀಘಡ: ದೇವಮಾನವ ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣ ತೀರ್ಪು ಹೊರ ಬಿದ್ದ ಕೇವಲ 45 ನಿಮಿಷದಲ್ಲೇ ಸಿಬಿಐ ವಿಶೇಷ ಕೋರ್ಟ್ ಇರುವ ಪಂಚಕುಲ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, 56 ಹಿಂಸಾಚಾರ  ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಇನ್ನು ಸೆಕ್ಟರ್ 6 ಪಂಚಕುಲದಲ್ಲಿ ಪೊಲೀಸರು ಮತ್ತು ಸೇನೆಯೊಂದಿಗೆ ಆಕ್ರೋಶಿತ ಜನರು ಸಂಘರ್ಷಕ್ಕಿಳಿದಿದ್ದು, ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ. ಪರಿಣಾಮ ಘಟನೆಯಲ್ಲಿ ಪೊಲೀಸರು ಸೇರಿದಂತೆ 10 ಮಂದಿ  ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂತೆಯೇ ಘರ್ಷಣೆ ವೇಳೆ ಎನ್ ಡಿ ಟಿವಿ, ಆಜ್ ತಕ್ ಸೇರಿದಂತೆ ಮೂರು ಸುದ್ದಿವಾಹಿನಿಗಳ ಓಬಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು,  ಹಲವು ಪತ್ರಕರ್ತರ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

45 ನಿಮಿಷದಲ್ಲಿ 56 ಹಿಂಸಾಚಾರ ಪ್ರಕರಣ
ಇನ್ನು ತೀರ್ಪು ಹೊರ ಬಿದ್ದ ಕೇವಲ 45 ನಿಮಿಷಗಳ ಅಂತರದಲ್ಲಿ ಹರ್ಯಾಣ ಮತ್ತು ಪಂಜಾಬ್ ನಲ್ಲಿ ಸುಮಾರು 56 ಕಡೆಗಳಲ್ಲಿ ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. ಇತ್ತ ಪಂಚಕುಲ ಆವರಣವೊಂದರಲ್ಲೇ 15ಕ್ಕೂ ಹೆಚ್ಚು ಘರ್ಷಣೆ  ಪ್ರಕರಣಗಳು ನಡೆದಿದ್ದು, ಪಂಚಕುಲ ಆವರಣದಲ್ಲಿ ಮೂರು ಓಬಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಅಂತೆಯೇ ಸಿರ್ಸಾದಲ್ಲಿ ನಡೆದ ಗಲಭೆಯಲ್ಲಿ ಓರ್ವ ಸುದ್ದಿವಾನಿಯ ಕ್ಯಾಮೆರಾಮನ್ ಗೆ ಆಕ್ರೋಶಿತರು ಥಳಿಸಿದ್ದು, ಗಂಭೀರವಾಗಿ  ಗಾಯಗೊಂಡಿದ್ದ ಕ್ಯಾಮೆರಾ ಮನ್ ನನ್ನು ಪೊಲೀಸರ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಂಚಕುಲದ ಆವರಣದಲ್ಲಿರುವ ಐಟಿ ಇಲಾಖೆ ಕಚೇರಿ ಮೇಲೆ ಉದ್ರಿಕ್ತರು ದಾಳಿ ಮಾಡಿದ್ದು, ಕಚೇರಿಗೆ ಬೆಂಕಿ ಹಚ್ಚಿದ್ದಾರೆ.

ಪಂಜಾಬ್ ನ ಮಲೌಟ್ ರೇಲ್ವೇ ನಿಲ್ದಾಣದಲ್ಲೂ ವ್ಯಾಪಕ ಹಿಂಸಾಚಾರ ನಡೆಸಲಾಗಿದ್ದು, ರೇಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ. ಇದಲ್ಲದೆ ಸಮೀವದ ಪೆಟ್ರೋಲ್ ಬಂಕ್ ಮೇಲೂ ಉದ್ರಿಕ್ತರು ದಾಳಿ ಮಾಡಿದ್ದು, ಪೆಟ್ರೋಲ್ ಪಂಪ್ ಗೆ  ಬೆಂಕಿ ಇಟ್ಟಿದ್ದಾರೆ. ಇಂತಹುದೇ ಮತ್ತೊಂದು ಪ್ರಕರಣ ಬಟಿಂಡಾದಲ್ಲೂ ಕೇಳಿಬಂದಿದೆ. ಘರ್ಷಣೆಯಲ್ಲಿ ಕಾರು ಬೈಕ್ ಸೇರಿ ಸುಮಾರು 100ಕ್ಕೂ ಹೆಚ್ಚು ವಾಹನಗಳು ಹಾನಿಗೀಡಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com