ಕೇರಳ: ಒಖಿ ಚಂಡಮಾರುತ ಸಂತ್ರಸ್ಥರ ಭೇಟಿ ಮಾಡಿದ ರಾಹುಲ್ ಗಾಂಧಿ

ಕಳೆದ 15 ದಿನಗಳ ಹಿಂದೆ ತಮಿಳುನಾಡು ಮತ್ತು ಕೇರಳದಲ್ಲಿ ರುದ್ರನರ್ತನ ತೋರಿದ್ದ ಒಖಿ ಚಂಡಮಾರುತ ಸಂತ್ರಸ್ಥ ಪ್ರದೇಶಗಳಿಗೆ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆ ಆಲಿಸಿದ್ದಾರೆ.
ಸಂತ್ರಸ್ಥರ ಭೇಟಿ ಮಾಡಿದ ರಾಹುಲ್ ಗಾಂಧಿ
ಸಂತ್ರಸ್ಥರ ಭೇಟಿ ಮಾಡಿದ ರಾಹುಲ್ ಗಾಂಧಿ
ತಿರುವನಂತಪುರಂ: ಕಳೆದ 15 ದಿನಗಳ ಹಿಂದೆ ತಮಿಳುನಾಡು ಮತ್ತು ಕೇರಳದಲ್ಲಿ ರುದ್ರನರ್ತನ ತೋರಿದ್ದ ಒಖಿ ಚಂಡಮಾರುತ ಸಂತ್ರಸ್ಥ ಪ್ರದೇಶಗಳಿಗೆ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆ ಆಲಿಸಿದ್ದಾರೆ.
ಒಖಿ ಚಂಡಮಾರುತದಿಂದ 66 ಜನರು ಜೀವ ಕಳೆದುಕೊಂಡ ದಕ್ಷಿಣ ಕೇರಳದ ಪ್ರದೇಶಗಳಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಭೇಟಿ ನೀಡಿ, ಸಂತ್ರಸ್ಥರ ಸಮಸ್ಯೆ ಆಲಿಸಿದರು. ಅಲ್ಲದೇ ಮೃತರು ಮತ್ತು  ನಾಪತ್ತೆಯಾದವರ ಸಂಬಂಧಿಗಳ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.
ಈ ವೇಳೆ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, "ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯದ ಅಗತ್ಯತೆ ಇದೆ. ಈಗ ಆಗಿರುವ ಹಾನಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ಪಾಠ ಕಲಿಯಬೇಕಿದೆ. ಅನಾಹುತ ತಪ್ಪಿಸಲು ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದೆ. ದೇಶದಲ್ಲಿ ಪ್ರಸ್ತುತ ರೈತರು ಮತ್ತು ಮೀನುಗಾರರ ಪರಿಸ್ಥಿತಿ ಒಂದೇ ಆಗಿದೆ. ಇಬ್ಬರೂ ಇಂದು ಕಠಿಣ  ದಿನಗಳನ್ನು ಎದುರಿಸುತ್ತಿದ್ದಾರೆ. ರೈತರಿಗಾಗಿ ಈಗಾಗಲೇ ಒಂದು ಸಚಿವಾಲಯವಿದೆ. ಮೀನುಗಾರರ ಹಿತಕಾಯಲು ಪ್ರತ್ಯೇಕ ಸಚಿವಾಲಯ ರಚಿಸುವ ಅಗತ್ಯವಿದೆ ಎಂದು ಹೇಳಿದರು. 
ರಾಹುಲ್ ಭೇಟಿ ವೇಳೆ ಕೇರಳ ಮಾಜಿ ಮುಖ್ಯಮಂತ್ರಿ ಉಮನ್‌ ಚಾಂಡಿ, ಸಂಸದ ಶಶಿ ತರೂರ್‌ ಮತ್ತು ಕೆ.ಸಿ.ವೇಣುಗೋಪಾಲ್‌ ಸಾಥ್‌ ನೀಡಿದರು.
ಕಳೆದ ನವೆಂಬರ್‌ 30ರಂದು ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ಒಖಿ ಚಂಡಮಾರುತ ಅಪ್ಪಳಿಸಿದ್ದರಿಂದ ಕರಾವಳಿ ಭಾಗದಲ್ಲಿ ನೂರಾರು ಮನೆಗಳು ನೆಲಕ್ಕಪ್ಪಳಿಸಿ ಲಕ್ಷಾಂತರ ಮೌಲ್ಯದ ಆಸ್ತಿ-ಪಾಸ್ತಿ  ನಷ್ಟವಾಯಿತು. ಅಲ್ಲದೆ ಒಖಿ ಚಂಡಮಾರುತ ಪರಿಣಾಮ ನಡೆದ ವಿವಿಧ ದುರಂತಗಳಲ್ಲಿ ನೂರು ಮಂದಿ ಅಸು ನೀಗಿ ಸುಮಾರು 600ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com