ಹೈದರಾಬಾದ್: ಹೊಸ ವರ್ಷಾಚರಣೆಗಾಗಿ 99 ಲಕ್ಷ ರುಪಾಯಿ ಮೌಲ್ಯದ ಡ್ರಗ್ಸ್ ಅನ್ನು ಸಾಗಿಸುತ್ತಿದ್ದ ಇಬ್ಬರು ನೈಜೆರಿಯಾ ಪ್ರಜೆಗಳನ್ನು ಹಾಗೂ ಓರ್ವ ಘಾನಾ ಪ್ರಜೆಯನ್ನು ಹೈದರಾಬಾದ್ ಪೊಲೀಸರು ಶುಕ್ರವಾರ ಬಂಜಾರ ಹಿಲ್ಸ್ ನಲ್ಲಿ ಬಂಧಿಸಿದ್ದಾರೆ.
ಬಂಧಿತ ವಿದೇಶಿ ಪ್ರಜೆಗಳಿಂದ 99 ಲಕ್ಷ ರುಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, ಅದನ್ನು ಹೊಸ ವರ್ಷದಂದು ನಡೆಯುವ ಪ್ರಮುಖ ಪಾರ್ಟಿಗೆಳಿಗೆ ಸಾಗಿಸಲು ಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
250 ಗ್ರಾಂ ಕೊಕೇನ್, 25 ಗ್ರಾಂ ಹೆರಾಯಿನ್ ಮತ್ತು ಕೊಕೇನ್ ಹೊಂದಿದ್ದ ಒಂಬತ್ತು ಎಕ್ಲೇರ್ ಚಾಕೊಲೇಟ್ ಹೊದಿಕೆಗಳನ್ನು ನಾವು ಜಪ್ತಿ ಮಾಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ವಿವಿ ಶ್ರೀನಿವಾಸ್ ರಾವ್ ಅವರು ಹೇಳಿದ್ದಾರೆ.
ಬಂಜಾರ ಹಿಲ್ಸ್ ನಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದ ನೈಜೀರಿಯಾದ ಅಜಾ ಜಾನ್ ಚುಕ್ವು (28) ಮತ್ತು ಬೆನಾರ್ಡ್ ವಿಲ್ಸನ್ (27) ಹಾಗೂ ಘಾನಾದ ಮೇಸನ್ ಲ್ಯೂಕಾಸ್(30)ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.