ಜಮ್ಮು-ಕಾಶ್ಮೀರ: ಸಿಆರ್'ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ- ಓರ್ವ ಯೋಧ ಹುತಾತ್ಮ, 2 ಗಾಯ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸಿಆರ್'ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರಿಗೆ ಗಾಯಗಳಾಗಿದೆ ಎಂದು ಭಾನುವಾರ ತಿಳಿದುಬಂದಿದೆ...
ಪುಲ್ವಾಮ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸಿಆರ್'ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಯೋಧರಿಗೆ ಗಾಯಗಳಾಗಿದೆ ಎಂದು ಭಾನುವಾರ ತಿಳಿದುಬಂದಿದೆ.
ಇಂದು ಬೆಳಗಿನ ಜಾವ 2.10ರ ಸುಮಾರಿಗೆ ಪುಲ್ವಾಮ ಜಿಲ್ಲೆಯ ಅವಂತಿಪುರದ ಬಳಿಯಿರುವ ಸಿಆರ್'ಪಿಎಫ್ ತರಬೇತಿ ಕೇಂದ್ರದ ಬಳಿ ಬಂದಿರುವ 2-3 ಉಗ್ರರ ತಂಡ ಏಕಾಏಕಿ ತರಬೇತಿ ಕೇಂದ್ರದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಬಳಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು ಎಂದು ವರದಿಗಳು ತಿಳಿಸಿವೆ.
ಉಗ್ರರು ದಾಳಿ ನಡೆಸಿದ ಪರಿಣಾಮ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಹುತಾತ್ಮನಾದ ಯೋಧನ್ನು ಸೈಫುದ್ದೀನ್ ಎಂದು ಗುರ್ತಿಸಲಾಗಿದೆ.
ಪ್ರಸ್ತುತ ಉಗ್ರರನ್ನು ಸದೆಬಡಿಯಲು ಸೇನಾಪಡೆ ಕಾರ್ಯಾಚರಣೆ ಇಳಿದಿದ್ದು, ಪ್ರಸ್ತುತ ಸ್ಥಳದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿಗಳು ನಡೆಯುತ್ತಿವೆ ಎಂದು ತಿಳಿದಿಬಂದಿದೆ.
ಮತ್ತಷ್ಟು ಉಗ್ರರು ನುಸುಳಿರುವ ಶಂಕೆಗಳು ವ್ಯಕ್ತವಾಗಿದ್ದು. ಇದೇ ರೀತಿಯ ಮತ್ತಷ್ಟು ದಾಳಿಗಳಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿಯೂ ಪುಲ್ವಾಮದ ಜಿಲ್ಲಾ ಪೊಲೀಸ್ ಕಾಂಪ್ಲೆಕ್ಸ್ ಮೇಲೆ ಮೂವರು ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 12 ಯೋಧರು ಹುತಾತ್ಮರಾಗಿದ್ದರು. 12 ಗಂಟೆಗಳ ಕಾಲ ಸುಧೀರ್ಘ ಕಾರ್ಯಾಚರಣೆ ನಡೆಸಿದ ಬಳಿಕ ಉಗ್ರರನ್ನು ಸದೆಬಡಿಯಲಾಗಿತ್ತು.