ಗೋವಾದಲ್ಲಿ ಹೊಸ ವರ್ಷಾಚರಣೆಗೆ ಪ್ರವಾಹ ಭೀತಿ

ಈ ಹೊಸ ವರ್ಷಕ್ಕೆ ಗೋವಾಗೆ ತೆರಳಿ ಅಲ್ಲಿನ ಕಡಲ ಕಿನಾರೆಗಳಲ್ಲಿ ಸಂಭ್ರಮಾಚರಣೆ ನಡೆಸಬೇಕೆನ್ನುವ ಆಸೆ ಹೊತ್ತಿರುವವರಿಗೆ ಇಲ್ಲಿದೆ ಎಚ್ಚರಿಕೆ
ಗೋವಾ ಕರಾವಳಿ ತೀರ
ಗೋವಾ ಕರಾವಳಿ ತೀರ
ಪಣಜಿ: ಈ ಹೊಸ ವರ್ಷಕ್ಕೆ ಗೋವಾಗೆ ತೆರಳಿ ಅಲ್ಲಿನ ಕಡಲ ಕಿನಾರೆಗಳಲ್ಲಿ ಸಂಭ್ರಮಾಚರಣೆ ನಡೆಸಬೇಕೆನ್ನುವ ಆಸೆ ಹೊತ್ತಿರುವವರಿಗೆ ಇಲ್ಲಿದೆ ಎಚ್ಚರಿಕೆ ಸಂದೇಶ. ಇದೇ ಜನವರಿ 2ರಂದು ಹುಣ್ಣಿಮೆ ಇರುವ ಕಾರಣ ಸಮುದ್ರದಲ್ಲಿ ಉಬ್ಬರ ಹೆಚ್ಚಿದ್ದು ದೊಡ್ಡ ದೊಡ್ಡ ಅಲೆಗಳು ತೀರದತ್ತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ಎಚ್ಚರಿಸಿದೆ.
ಕರಾವಳಿ ತೀರದ ಎಲ್ಲಾ ವ್ಯಾಪಾರಸ್ಥರಿಗೆ ಗೋವಾ ಪ್ರವಾಸೋದ್ಯಮ ನಿರ್ದೇಶಕ ಮೆನಿನೋ ಡಿ'ಸೋಜಾ ಎಚ್ಚರಿಕೆಯ ಸಂದೇಶ ನೀಡಿದ್ದು ಜನವರಿ 2 ಹಾಗೂ 31ರಂದು ಹುಣ್ಣಿಮೆ ಇದ್ದು ಸಮುದ್ರದಲ್ಲಿ ಬೃಹತ್ ಅಲೆಗಳೇಳುವ ಸಂಬವವಿದೆ ಎಂದಿದ್ದಾರೆ.
"ಜನವರಿ 2 ಮತ್ತು ಜನವರಿ 31, 2018 ರಂದು ಹುಣ್ಣಿಮೆ ಇದ್ದು, ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಸಮೀಪಕ್ಕೆ ಬರುತ್ತಾನೆ ಈ ಕಾರಣದಿಂದಾಗಿ ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತವೆ, ಕಡಲತೀರದಲ್ಲಿ ಪ್ರವಾಹದ ಸಾಧ್ಯತೆಯು ಹೆಚ್ಚಾಗಲಿದೆ. ಸಮುದ್ರ ತೀರದ ಚಟುವಟಿಕೆಗಳಿಗೆ ಇದು ಬಾಧಕವಾಗಲಿದೆ. ಸಮುದ್ರ ತೀರದ ಜಲಕ್ರೀಡಾ ನಿರ್ವಾಹಕರು ಸೇರಿ ವ್ಯಾಪಾರಸ್ಥರು  ಜನವರಿ 1-2 ಮತ್ತು ಜನವರಿ 30 ರಂದು ಹೆಚ್ಚಿನ ಮುತುವರ್ಜಿ ವಹಿಸಿರಬೇಕು. ಯಾವುದೇ ರೀತಿಯಲ್ಲಿ ಜೀವಹಾನಿ, ಆಸ್ತಿ ಪಾಸ್ತಿ ನಷ್ಟವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ" ಡಿ'ಸೋಜಾ ಹೇಳಿದ್ದಾರೆ.
ಗೋವಾ ದೇಶದ ಅತ್ಯಂತ ಜನಪ್ರಿಯ ಬೀಚ್ ಮತ್ತು ನೈಟ್ ಲೈಫ್ ಪ್ರವಾಸೋದ್ಯಮ ತಾಣವಾಗಿದ್ದು ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಮಯದಲ್ಲಿ ಇಲ್ಲಿಗೆ ಸುಮಾರು  ಐದು ಮಿಲಿಯನ್ ಪ್ರವಾಸಿಗರು ಆಗಮಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com