ನವದೆಹಲಿ: ಕಳೆದ ಮೂರು ತಿಂಗಳಲ್ಲಿ ತಾವು ಕೈಗೊಂಡ ಪ್ರಯಾಣದ ವಿವರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದಾರೆ.
ಸಚಿವರು ಕೇಂದ್ರ ಸರ್ಕಾರ ಯಾವ ಉದ್ದೇಶದಿಂದ ನೋಟ್ ನಿಷೇಧ ನಿರ್ಧಾರ ತೆಗೆದುಕೊಂಡಿತು ಎಂಬುದನ್ನು ಜನತೆಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಧಾನಿ ಇತ್ತೀಚಿಗೆ ನಡೆದ ಸಂಪುಟ ಸಭೆಯಲ್ಲಿ ಕಳೆದ ಮೂರು ತಿಂಗಳ ಪ್ರಯಾಣದ ವಿವರ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಳೆಯೊಳಗೆ ವಿವರ ನೀಡಲು ಸಚಿವರಿಗೆ ಅವಕಾಶ ನೀಡಲಾಗಿದ್ದು, ಇದರ ಹೊಣೆಯನ್ನು ಗ್ರಾಮೀಣ ಅಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
ನೋಟ್ ನಿಷೇಧದ ನಂತರ ದೆಹಲಿಯಿಂದ ಹೊರಗಡೆ ಪ್ರಯಾಣ ಮಾಡಿದ ಬಗ್ಗೆ ವಿವರೆ ನೀಡಿ. ಒಂದು ವೇಳೆ ಪ್ರಯಾಣ ಮಾಡದಿದ್ದರೆ ದೆಹಲಿಯಲ್ಲಿ ಕಚೇರಿ ಕೆಲಸ ಮಾಡಿದ್ದನ್ನು ತಿಳಿಸಬೇಕು ಎಂದು ಸಚಿವರಿಗೆ ಸೂಚಿಸಿಲಾಗಿದೆ.
ಸಚಿವರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿದ ಬಗ್ಗೆ, ವಿಶೇಷವಾಗಿ ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಸಚಿವರು ಜನತೆಗೆ ಹೇಗೆ ಸ್ಪಂದಿಸಿದ್ದಾರೆ ಎಂಬುದು ತಿಳಿಯುವುದು ಇದರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.