ವಾರದೊಳಗೆ ಬಹುಮತ ಸಾಬೀತು ಪಡಿಸಲಿ: ರಾಜ್ಯಪಾಲರಿಗೆ ಅಟಾರ್ನಿ ಜನರಲ್ ಸಲಹೆ

ಮಹತ್ವದ ಬೆಳವಣಿಗೆಯಲ್ಲಿ ವಾರದೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಲು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ವಾರದೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಲು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರಿಗೆ ಸಲಹೆ  ನೀಡಿದ್ದಾರೆ.

ತಮಿಳುನಾಡು ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯ  ಪ್ರವೇಶ ಮಾಡಿದೆ. ತಮಿಳುನಾಡು ರಾಜಕೀಯ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಕಾಣಿಸುವ ಉದ್ದೇಶದಿಂದ ಆಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ.  ಅದರಂತೆ ಇನ್ನೊಂದು ವಾರದಲ್ಲಿ ವಿಶೇಷ ಅಧಿವೇಶನ ಕರೆದು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡುವಂತೆ ಸಲಹೆ ನೀಡಿದ್ದಾರೆ.

1990ರ ದಶಕದಲ್ಲಿ ಉತ್ತರ ಪ್ರದೇಶದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಗದಾಂಬಿಕಾ ಪಾಲ್ ಮತ್ತು ಕಲ್ಯಾಣ್ ಸಿಂಗ್ ಅವರ ನಡುವೆ ಬಿಕ್ಕಟ್ಟು ಏರ್ಪಟ್ಟಾಗ ಬಹುಮತ ಸಾಬೀತು ಪಡಿಸುವಂತೆ ಸೂಚಿಸಲಾಗಿತ್ತು.  ಪ್ರಸ್ತುತ ತಮಿಳುನಾಡು ಪರಿಸ್ಥಿತಿ ಕೂಡ ಭಿನ್ನವಾಗಿಯೇನೂ ಇಲ್ಲ. ಹೀಗಾಗಿ ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ಅವರು ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿ ಎಂದು ಸಲಹೆ ನೀಡಿದ್ದಾರೆ.

ಮಂಗಳವಾರ ಸುಪ್ರೀಂ ನಲ್ಲಿ ಶಶಿಕಲಾ ಭವಿಷ್ಯ ನಿರ್ಧಾರ!
ಏತನ್ಮಧ್ಯೆ ಇದೇ ಮಂಗಳವಾರ ಶಶಿಕಲಾ ಅವರ ರಾಜಕೀಯ ಭವಿಷ್ಯ ಸುಪ್ರೀಂ ಕೋರ್ಟ್ ನಲ್ಲಿ ನಿರ್ಧಾರವಾಗಲಿದ್ದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ. ಹೀಗಾಗಿ  ಮಂಗಳವಾರದ ತೀರ್ಪು ಶಶಿಕಲಾ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದ್ದು, ಒಂದು ವೇಳೆ ಶಶಿಕಲಾ ವಿರುದ್ಧ ತೀರ್ಪು ಬಂದರೆ ಶಶಿಕಲಾ ರಾಜಕೀಯ ಭವಿಷ್ಯ ಆರಂಭದಲ್ಲೇ ಮುದುಡಿಕೊಳ್ಳಲಿದೆ.

ಇತ್ತ ಶಶಿಕಲಾ ಬಣ ತಮಗೆ ಬಹುಮತವಿದ್ದು, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತಿದ್ದರೆ, ಅತ್ತ ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ಅವರು ತಮ್ಮ ಬೆಂಬಲಿಗ ಶಾಸಕರ ಮತ್ತು ಸಚಿವರನ್ನು ಬಲವಂತವಾಗಿ  ಕೂಡಿಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com