

ನವದೆಹಲಿ: ನಿರಂತರ ಉಗ್ರರ ದಾಳಿಗೆ ತುತ್ತಾಗುತ್ತಿರುವ ಇರಾಕ್ ಹಾಗೂ ಅಫ್ಘಾನಿಸ್ತಾನಕ್ಕಿಂತಲೂ ಭಾರತದಲ್ಲಿಯೇ ಹೆಚ್ಚಿನ ಬಾಂಬ್ ಸ್ಫೋಟಗಳು ನಡೆದಿವೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
2016ರಲ್ಲಿ ಎಲ್ಇಡಿ, ಗ್ರೆನೇಡ್ ಸೇರಿದಂದೆ ಭಾರತದಲ್ಲಿ 406 ಸ್ಫೋಟಗಳು ಸಂಭವಿಸಿದ್ದು, 406 ಸ್ಫೋಟಗಳ ಪೈಕಿ 337 ಬಾಂಬ್ ಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಲಾಗಿದೆ. 69 ಸ್ಫೋಟಕ್ಕೆ ಗ್ರೆನೇಡ್ ಮತ್ತು ಶೆಲ್ ಬಳಕೆ ಮಾಡಲಾಗಿದೆ. ಇದರಂತೆ 2016ರಲ್ಲಿ ಅತೀ ಹೆಚ್ಚು ಬಾಂಬ್ ಸ್ಫೋಟ ಸಂಭವಿಸಿದ ದೇಶದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ನ್ಯಾಷನಲ್ ಬಾಂಬ್ ಡಾಟಾ ಸೆಂಟರ್ ವರದಿ ತಿಳಿಸಿದೆ.
ಮಾರ್ಚ್ ತಿಂಗಳು ಕಳೆದ ವರ್ಷ ಭಾರತಕ್ಕೆ ಕರಾಳ ತಿಂಗಳೇ ಎಂದು ಹೇಳಬಹುದು. ಕಳೆದ ವರ್ಷ ಮಾರ್ಚ್ ತಿಂಗಳೊಂದರಲ್ಲಿಯೇ ಭಾರತದಲ್ಲಿ 42 ಬಾಂಬ್ ಸ್ಫೋಟಗಳು ಸಂಭವಿಸಿದೆ. ಏಪ್ರಿಲ್ ನಲ್ಲಿ 36 ಸ್ಫೋಟ ಪ್ರಕರಣಗಳು ಸಂಭವಿಸಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಅತೀ ಹೆಚ್ಚು ಬಾಂಬ್ ಸ್ಫೋಟಗಳು ಸಂಭವಿಸಿರುವುದಾಗಿ ವರದಿಗಳಾಗಿದ್ದು, ಶೇ.121 ರಷ್ಟು ಐಇಡಿ ಸ್ಫೋಟಗಳು ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಜುಲೈ ತಿಂಗಳಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಬಾಂಬ್ ದಾಳಿ ಹೆಚ್ಚಾಗಿತ್ತು.
2ನೇ ಸ್ಥಾನದಲ್ಲಿ ಇರಾಕ್ ಇದ್ದು ಇರಾಕ್ ನಲ್ಲಿ ಕಳೆದ ವರ್ಷ ಒಟ್ಟು 221 ಬಾಂಬ್ ಸ್ಫೋಟಗಳು ಸಂಭವಿಸಿದೆ. ಇನ್ನು ಪಾಕಿಸ್ತಾನದಲ್ಲಿ 161, ಆಘ್ಘಾನಿಸ್ತಾನದಲ್ಲಿ 132, ಟರ್ಕಿ 92, ಥೈಲಾಂಡ್ 71, ದಕ್ಷಿಣ ಆಫ್ರಿಕಾ 56, ಸಿರಿಯಾ, ಈಜಿಪ್ಟ್ ನಲ್ಲಿ 42 ಮತ್ತು ಬಾಂಗ್ಲಾದೇಶದಲ್ಲಿ 29 ಬಾಂಬ್ ಸ್ಫೋಟಗಳು ಸಂಭವಿಸಿದೆ ಎಂದು ಎನ್'ಬಿಡಿಸಿ ತನ್ನ ವರದಿಯಲ್ಲಿ ತಿಳಿಸಿದೆ.