

ಇಂಫಾಲ: ಮಣಿಪುರದ ಮಾಜಿ ಸಚಿವ ಗಂಗುಮೇಯಿ ಕಬುಯಿ ಅವರು ನಿಧನರಾಗಿದ್ದು ಅವರಿಗೆ 77 ವರ್ಷ ವಯಸ್ಸಾಗಿತ್ತು.
ರಾಜಧಾನಿ ಇಂಫಾಲದಲ್ಲಿರುವ ಅವರ ನಿವಾಸದಲ್ಲೇ ಗಂಗುಮೇಯಿ ಕಬುಯಿ ಅವರು ಇಂದು ಬೆಳಗ್ಗೆ ಸುಮಾರು 8.15ರ ಸುಮಾರಿನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಗಂಗುಮೇಯಿ ಕಬುಯಿ ಅವರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ರಾಜಕೀಯ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲೂ ಜನಪ್ರಿಯರಾಗಿದ್ದ ಗಂಗುಮೇಯಿ ಕಬುಯಿ ಅವರು ಸುಮಾರು 15ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಪ್ರಖ್ಯಾತ ಇತಿಹಾಸಕಾರರಾಗಿದ್ದ ಗಂಗುಮೇಯಿ ಕಬುಯಿ ಅವರು ಮಣಿಪುರದ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ನುಂಗ್ಬಾ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗಂಗುಮೇಯಿ ಕಬುಯಿ ಅವರು 90ರ ದಶಕದಲ್ಲಿ 2 ಬಾರಿ ಸಚಿವರಾಗಿದ್ದರು. 2013ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.
ಖ್ಯಾತ ಇತಿಹಾಸ ತಜ್ಞರಾಗಿದ್ದ ಗಂಗುಮೇಯಿ ಕಬುಯಿ ಅವರು ಸಾಕಷ್ಟು ಇತಿಹಾಸಕ್ಕೆ ಸಂಬಂಧಿಸಿದ ಸಾಮಾಜಿಕ ಸಂಸ್ಥೆಗಳನ್ನು ಹುಟ್ಟುಹಾಕಿದ್ದರು.