
ಕಾನ್ಪುರ: ಕಾನ್ಪುರದ ದಹತ್ ಜಿಲ್ಲೆಯ ಪುಖಾರಿಯನ್ ಪ್ರದೇಶದಲ್ಲಿ ರು.7.64 ಲಕ್ಷ ಮೌಲ್ಯದ 2000 ರುಪಾಯಿಯ ಹೊಸ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿಸಿದ್ದ ಪೊಲೀಸರು ಕಾನ್ಪುರದಲ್ಲಿರುವ ಸಮ್ರೇಂದರ್ ಸಚನ್ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ರು.7.64 ಲಕ್ಷ ಮೌಲ್ಯದ ರು.2000 ಹೊಸ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಹೈಕ್ವಾಲಿಟಿ ಪ್ರಿಂಟರ್ ಮತ್ತು ಸ್ಕ್ಯಾನರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಪ್ರಸೂನ್ ಸಚನ್, ಆಶಿಶ್ ಗುಪ್ತಾ, ಸಮ್ರೇಂದರ್ ಎಂದು ಗುರ್ತಿಸಲಾಗಿದೆ. ವಿಚಾರಣೆ ವೇಳೆ ಸಮ್ರೇಂದರ್ ಕೆಲ ವಿಚಾರಗಳನ್ನು ಬಾಯ್ಬಿಟ್ಟಿದ್ದು, ಆತನ ನೀಡಿದ ಮಾಹಿತಿ ಮೇರೆಗೆ ರು.7.64 ಲಕ್ಷ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ರು.8 ಲಕ್ಷ ಮೌಲ್ಯದ ರು.500 ಹಾಗೂ 2,000 ನಕಲಿ ನೋಟುಗಳನ್ನು ಈಗಾಗಲೇ ಕಾನ್ಪುರದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಭಾಕರ್ ಚೌಧರಿ ಅವರು ಹೇಳಿದ್ದಾರೆ.
ನಕಲಿ ನೋಟುಗಳನ್ನು ಅಸಲಿ ನೋಟುಗಳಿಗೆ ಹೋಲಿಕೆ ಮಾಡಿದರೆ, ಎರಡೂ ನೋಟುಗಳು ಒಂದೇ ರೀತಿ ಕಾಣುತ್ತದೆ. ನಕಲಿ ನೋಟಿನ ಪೇಪರ್ ಗಳು ಅತ್ಯಂತ ಸಣ್ಣದಾಗಿದ್ದು, ಆರ್ ಬಿಐ ಚಿಹ್ನೆ ಮಾತ್ರ ಪತ್ರೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಬಂಧಿತ ಮೂವರು ಆರೋಪಿಗಳು ಪದವೀದರರಾಗಿದ್ದು, ಮೂವರ ಪೈಕಿ ಓರ್ವ ಆರೋಪಿ ಕಂಪ್ಯೂಟರ್ ನಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement