

ಭುವನೇಶ್ವರ: ಹೈಟೆಕ್ ಮೊಬೈಲ್ ಕಳ್ಳರ ಗ್ಯಾಂಗ್ ಮೇಲೆ ಒಡಿಶಾ ಪೊಲೀಸರು ದಾಳಿ ಮಾಡಿದ್ದು, ರೂ.10 ಲಕ್ಷ ಮೌಲ್ಯದ 66 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ನಾಲ್ವರಲ್ಲಿ ಓರ್ವ ಬಿ.ಟೆಕ್ ವಿದ್ಯಾರ್ಥಿಯಾಗಿದ್ದು ಈತ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಟೊಮಾಂಡೋ, ರಾಷ್ಟ್ರೀಯ ಹೆದ್ದಾರಿ 16 ಹಾಗೂ ಏಮ್ಸ್ ಪ್ರದೇಶಗಳಲ್ಲಿ ಪ್ರಯಾಣಿಕರು ಹಾಗೂ ಪಾದಚಾರಿಗಳನ್ನು ಗುರಿಯಾಗಿರಿಸಿಕೊಂಡು ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕಳ್ಳರು ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡಿ ಮೊಬೈಲ್ ಗಳನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು. ಆರೋಪಿಗಳ ದಾಳಿಗೆ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.