ಸೆಲ್ಫಿ ಗೀಳಿಗೆ ಮತ್ತೊಂದು ಬಲಿ; ರೈಲಿನ ಮೇಲ್ಭಾಗದಲ್ಲಿ ನಿಂತಿದ್ದ ಟೆಕಿ ವಿದ್ಯುತ್ ಸ್ಪರ್ಶಿಸಿ ಸಾವು
ಭುವನೇಶ್ವರ: ಚಲಿಸುತ್ತಿದ್ದ ರೈಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಟೆಕಿಯೋರ್ವ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಭೀಕರ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಜಾರ್ಸುಗುಡಾ ರೈಲ್ವೇ ನಿಲ್ದಾಣದ ಸಮೀಪ ಈ ಘಟನೆ ನಡೆದಿದ್ದು, ಮೃತ ಟೆಕಿಯನ್ನು ರಾಜ್ ಗೋಪಾಲ್ ಗೌರವ್ ಪಾತ್ರಾ ಎಂದು ಗುರುತಿಸಲಾಗಿದೆ. ರೈಲು ಚಲಿಸುತ್ತಿದ್ದ ಸಂದರ್ಭದಲ್ಲೇ ರೈಲಿನ ಮೇಲೆ ಏರಿದ ರಾಜ್ ಗೋಪಾಲ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂದೆ ಇದ್ದ ವಿದ್ಯುತ್ ತಂತಿಯಿಂದ ಸ್ಪರ್ಶಿಸಿದೆ. ಕೂಡಲೇ ವಿದ್ಯುತ್ ಆಘಾತಕ್ಕೊಳಗಾದ ರಾಜ್ ಗೋಪಾಲ್ ನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಶೇ.65ರಷ್ಟು ಸುಟ್ಟ ಗಾಯಗಳಿಂದ ರಾಜ್ ಗೋಪಾಲ್ ಗೌರವ್ ಪಾತ್ರಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಮೃತ ಗೌರವ್ ಜಾರ್ಸುಗುಡಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮಾ ಮಾಡಿಕೊಂಡಿದ್ದ. ಇನ್ನು ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದು, ಇಬ್ಬರೂ ಗೌರವ್ ಸ್ನೇಹಿತರು ಎಂದು ತಿಳಿದುಬಂದಿದೆ. ಪ್ರಸ್ತುತ ಇವರು ಅಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ