ಚುನಾವಣಾ ಆಯೋಗ ಛೀಮಾರಿ: ಹೇಳಿಕೆ ಸಮರ್ಥಿಸಿಕೊಂಡ ಕೇಜ್ರಿವಾಲ್

ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆಂದು ಚುನಾವಣಾ ಆಯೋಗ ಛೀಮಾರಿ ಹಾಕಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಹೇಳಿಕೆಯನ್ನು ಭಾನುವಾರ...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಪಣಜಿ: ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆಂದು ಚುನಾವಣಾ ಆಯೋಗ ಛೀಮಾರಿ ಹಾಕಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಹೇಳಿಕೆಯನ್ನು ಭಾನುವಾರ ಸಮರ್ಥಿಸಿಕೊಂಡಿದ್ದಾರೆ.

ಗೋವಾದ ಶಿರೋಡಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ತಮ್ಮ ಹೇಳಿಕೆ ಕುರಿತಂತೆ ಇಂದು ಸಮರ್ಥನೆ ನೀಡಿರುವ ಕೇಜ್ರಿವಾಲ್ ಅವರು, ಚುನಾವಣಾ ಆಯೋಗದ ನಿಲುವಿನ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಭ್ರಷ್ಟಾಚಾರವನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ. ಚುನಾವಣಾ ಸಂದರ್ಭದಲ್ಲಿ ಪ್ರತೀಯೊಂದು ಭಾಗದಲ್ಲೂ ಹಣವನ್ನು ನೀಡಲಾಗುತ್ತಿರುತ್ತದೆ. ಇತರೆ ಪಕ್ಷಗಳು ನೀಡುವ ಹಣವನ್ನು ತೆಗೆದುಕೊಂಡು ನಮ್ಮ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಿದ್ದೆ. ಆದರೆ, ಆಯೋಗ ಕೇಜ್ರಿವಾಲ್ ಅವರು ಏನು ಹೇಳುತ್ತಿದ್ದಾರೋ ಅದನ್ನು ಮಾಡಬೇಡಿ ಎಂದು ಹೇಳುತ್ತಿದೆ. ಅಂದರೆ ಯಾರು ದುಡ್ಡು ಕೊಡುತ್ತಾರೋ ಅವರಿಗೆ ಮತಹಾಕಿ ಎಂಬರ್ಥವೇ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗದ ಈ ನಿಲುವು 'ಕಾನೂನುಬಾಹಿರ, ಅಸಾಂವಿಧಾನಿಕ ಹಾಗೂ ತಪ್ಪು'. ಆಯೋಗದ ನಿಲುವಿನ ವಿರುದ್ಧ ಹೋರಾಡುತ್ತೇನೆಂದು ತಿಳಿಸಿದ್ದಾರೆ.

ಕಾಂಗ್ರೆಸ್ ಆಗಲೀ ಅಥವಾ ಬಿಜೆಪಿಯೇ ಆಗಲಿ ಯಾರೇ ಹಣವನ್ನು ಕೊಟ್ಟರೂ ಅದನ್ನು ತೆಗೆದುಕೊಳ್ಳಿ. ಆದರೆ, ನನಗೆ ನಿಮ್ಮ ಮತವನ್ನು ಹಾಕಿ ಎಂದು ಜನರಿಗೆ ಹೇಳಿದ್ದೆ. ಇದರಲ್ಲಿ ಭ್ರಷ್ಟಾಚಾರವೇನಿದೆ? ನನ್ನಿಂದ ಹಣವನ್ನು ತೆಗೆದುಕೊಂಡು ನನಗೇ ಮತ ಹಾಕಿ ಎಂದು ಹೇಳಿದ್ದರೆ, ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ಒಪ್ಪಿಕೊಳ್ಳುತ್ತಿದೆ. ಹೇಳಿಕೆ ಸಂಬಂಧ ಈಗಾಗಲೇ ನಾನು ಬರವಣಿಗೆ ಮೂಲಕ ಚುನಾವಣಾ ಆಯೋಗಕ್ಕೆ ಪತ್ರವನ್ನು ಕಳುಹಿಸಿದ್ದೇನೆ.

ದೆಹಲಿಯಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ನಾನು ಇದೇ ರೀತಿಯ ಹೇಳಿಕೆಯೊಂದನ್ನು ನೀಡಿದ್ದೆ. ಆಗಲೂ ಚುನಾವಣಾ ಆಯೋಗ ನನಗೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಭ್ರಷ್ಟಾಚಾರವಲ್ಲ ಎಂದು ಹೇಳಿತ್ತು. ಇದೀಗ ಚುನಾವಣಾ ಆಯೋಗ ಹೊಸ ಘೋಷಣೆ ಕೂಗಬೇಕಿದೆ. ಹಣ ನೀಡುವವರಿಗೆ ಮತ ಹಾಕಬೇಡಿ, ಹಣ ನೀಡದವರಿಗೆ ಮತ ಹಾಕಿ ಎಂದು ಚುನಾವಣಾ ಎಂದು ಕೂಗಬೇಕಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ಹಿಂದೆ ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ಅವರು ಪರಿಣಾಮಕಾರಿ ಹೇಳಿಕೆಯೊಂದನ್ನು ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ, ಆಮ್ ಆದ್ಮಿ ಪಕ್ಷಕ್ಕೆ ಮಾತ್ರವೇ ಮತ ಹಾಕಿ ಎಂದು ಜನರಿಗೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com