ಪಾಟ್ನ: ಮದ್ಯಪಾನದ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡಲಾಗಿದ್ದ ಮಾನವ ಸರಪಳಿಯಲ್ಲಿ 3 ಕೋಟಿ ಜನರು ಪಾಲ್ಗೊಂಡಿದ್ದು, ಅಭಿಯಾನ ಯಶಸ್ವಿಯಾಗಿದ್ದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯದ ಜನತೆಯನ್ನು ಶ್ಲಾಘಿಸಿದ್ದಾರೆ.
ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಹಾರ ರಾಜ್ಯದಲ್ಲಿ ಮಾನವ ಸರಪಳಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಅಭಿಯಾನಕ್ಕೆ ಬಿಹಾರ ರಾಜ್ಯದ ಜನತೆ ಮತ್ತು ರಾಜಕಾರಣಿಗಳು ಪಕ್ಷಭೇಧ ಮರೆತು ಮುಖ್ಯಂತ್ರಿ ನಿತೀಶ್ ಕುಮಾರ್ ಅವರ ಜೊತೆ ಕೈಜೋಡಿಸಿದ್ದರು. ನಿನ್ನೆ ನಡೆದ ಈ ಅಭಿಯಾನದಲ್ಲಿ 3 ಕೋಟಿ ಜನರು ಭಾಗಿಯಾಗಿ ವಿಶ್ವದ ಅತೀ ದೊಡ್ಡ ಮಾನವ ಸರಪಳಿಯನ್ನು ನಿರ್ಮಿಸಿದ್ದರು.
ಬಿಹಾರ ರಾಜ್ಯದ ಗಾಂಧಿ ಮೈದಾನದಲ್ಲಿ ನಿನ್ನೆ ಬಣ್ಣಬಣ್ಣದ ಬಲೂನ್ ಗಳನ್ನು ಹಾರಿಬಿಟ್ಟ ನಿತೀಶ್ ಕುಮಾರ್ ಅವರು ಮಾನವ ಸರಪಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪಕ್ಷಭೇದವನ್ನು ಮರೆತು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ರಾಜ್ಯ ವಿಧಾನಸಭೆಯ ಸ್ಪೀಕರ್ ವಿಜಯ್ ಕುಮಾರ್ ಚೌಧರಿಯವರು ನಿತೀಶ್ ಕುಮಾರ್ ಅವರ ಕೈ ಹಿಡಿದು ಸರಪಳಿಯಲ್ಲಿ ಭಾಗಿಯಾದರು. ಇಲ್ಲದೆ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ವಿಧಾನ ಪರಿಷತ್ ಅಧ್ಯಕ್ಷ ಅದ್ವೇಶ್ ನಾಯರಣ್ ಸಿಂಗ್, ರಾಜ್ಯ ಕಾಂಗ್ರೆಸ್ ನಾಯಕ ಮತ್ತು ಸಚಿವ ಅಶೋಕ್ ಚೌಧರಿ ಸೇರಿದಂತೆ ಹಲವಾರು ಸಚಿವರು, ಶಾಸಕರೂ ಕೂಡ ಮಾನವ ಸರಪಳಿಗೆ ಕೊಂಡಿಯಾದರು.
ಮಾನವ ಸರಪಳಿ ಸೃಷ್ಟಿಸಿವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಬಿಹಾರ ಜನತೆಯನ್ನು ನಿತೀಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ. 11,292 ಕಿಮೀ ವರೆಗೂ 2 ಕೋಟಿಗೂ ಅಧಿಕ ಜನರು ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು. 3ಕೋಟಿಗೂ ಹೆಚ್ಚು ಜನರು ಬೀದಿಬೀದಿಗಳಲ್ಲಿ ನಿಂತು ಅಭಿಯಾನಕ್ಕೆ ಕೈಜೋಡಿಸಿದರು.
ಇದೊಂದು ಐತಿಹಾಸಿಕ ದಿನವಾಗಿದೆ. ನಿರೀಕ್ಷೆಗೂ ಮೀರಿ ಜನರು ಮದ್ಯಪಾನದ ವಿರುದ್ಧ ನಡೆಸಲಾದ ಅಭಿಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಭಿಯಾನ ಇಂದು ಯಶಸ್ವಿಯಾಗಿದೆ. ಈ ಹಿಂದೆ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ದಾಖಲೆ ಮಾಡಲಾಗಿತ್ತು. ಅವರು ಇತರೆ ವಿಚಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾನವ ಸರಪಳಿಯನ್ನು ನಿರ್ಮಿಸಿದ್ದರು. ಆದರೆ, ನಮ್ಮ ರಾಜ್ಯ ಉತ್ತಮ ಸಮಾಜಕ್ಕಾಗಿ ಮಾನವ ಸರಪಳಿಯನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ.
ಇದೊಂದು ಅತೀದೊಡ್ಡ ಪರಿಣಾಮಕಾರಿಯಾಗಲಿದೆ. ಆದಾಯಕ್ಕೆ ಧಕ್ಕೆಯುಂಟಾಗುತ್ತದೆ ಎಂಬುದನ್ನು ಆಲೋಚಿಸುತ್ತಿರುವ ಇತರೆ ರಾಜ್ಯದಳಿಗೆ ಬಿಹಾರ ರಾಜ್ಯದ ದಿಟ್ಟ ಹೆಜ್ಜೆ ಪಾಠವಾಗಲಿದೆ ಎಂದು ತಿಳಿಸಿದ್ದಾರೆ.
Advertisement