2 ವರ್ಷಗಳ ಬಳಿಕ ತ.ನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಆಯೋಜನೆ

ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ ಬಳಿಕ ಸರಿಸುಮಾರು 2 ವರ್ಷಗಳ ಕಾಲ ಸ್ಥಗಿತವಾಗಿದ್ದ ಜಲ್ಲಿಕಟ್ಟು ಆಚರಣೆ ಇದೀಗ ತಮಿಳುನಾಡಿನಲ್ಲಿ ಮತ್ತೆ ಗರಿಗೆದರಿದ್ದು, ವಿವಿಧೆಡೆ ಜಲ್ಲಿಕಟ್ಟು ಆಚರಣೆ ಮಾಡಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ ಬಳಿಕ ಸರಿಸುಮಾರು 2 ವರ್ಷಗಳ ಕಾಲ ಸ್ಥಗಿತವಾಗಿದ್ದ ಜಲ್ಲಿಕಟ್ಟು ಆಚರಣೆ ಇದೀಗ ತಮಿಳುನಾಡಿನಲ್ಲಿ ಮತ್ತೆ ಗರಿಗೆದರಿದ್ದು, ವಿವಿಧೆಡೆ ಜಲ್ಲಿಕಟ್ಟು ಆಚರಣೆ  ಮಾಡಲಾಗುತ್ತಿದೆ.

ತಮಿಳುನಾಡಿನ ತಿರುಚ್ಚಿ, ಚೆನ್ನೈ, ಮಣಪ್ಪರೈ, ದಿಂಡಿಗಲ್ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಜಲ್ಲಿಕಟ್ಟು ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಸರ್ಕಾರ ಜಾರಿ ಮಾಡಿರುವ ಮುಂಜಾಗ್ರತಾ ನಿರ್ದೇಶನಗಳನ್ನು ಪಾಲಿಸಿಯೇ  ಸ್ಥಳೀಯ ಜಿಲ್ಲಾಡಳಿತ ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಿದ್ದು, ಅದರಂತೆ ಇಂದು ವಿವಿಧ ಸಂಘಟನೆಗಳು ಜಲ್ಲಿಕಟ್ಟು ಆಚರಣೆ ಮಾಡುತ್ತಿವೆ. ಐತಿಹಾಸಿಕ ಹಿನ್ನಲೆಯುಳ್ಳ ತಿರುಚ್ಚಿಯ ಕರುಂಗಲಂನ ಚರ್ಚ್ ಸ್ಟ್ರೀಟ್ ನಲ್ಲಿ ಜಲ್ಲಿಕಟ್ಟು  ನಡೆಯುತ್ತಿದ್ದು, ಸುತ್ತಮುತ್ತಲಿನ ಸುಮಾರು 25ಕ್ಕೂ ಹಳ್ಳಿಗಳ ಜನರು ಜಲ್ಲಿಕಟ್ಟು ವೀಕ್ಷಣೆಗೆ ಆಗಮಿಸಿದ್ದಾರೆ. ಭದ್ರತೆಗಾಗಿಯೇ ಸುಮಾರು 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು, ವಿಶೇಷ ಕಾರ್ಯಪಡೆಗಳನ್ನು ನಿಯೋಜಿಸಲಾಗಿದ್ದು,  ಸ್ವಯಂ ಪ್ರೇರಿತ ಕಾರ್ಯಕರ್ತರೂ ಕೂಡ ಭದ್ರತಾ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ತಮಿಳುನಾಡಿನ ವಿವಿಧೆಡೆ ಇಂದು ನಡೆಯುತ್ತಿರುವ ಜಲ್ಲಿಕಟ್ಟು ಆಚರಣೆಯಲ್ಲಿ ಸುಮಾರು 500ರಿಂದ 600ಕ್ಕೂ ಹೆಚ್ಚು ಗೂಳಿಗಳು ಹಾಗೂ 2 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿ  ವಿವಿಧೆಡೆಯಿಂದ ಗೂಳಿಗಳನ್ನು ಕರೆಸಿಕೊಳ್ಳಲಾಗಿದ್ದು, ಗೂಳಿ ಪಳಗಿಸುವ ತಜ್ಞರು ಕೂಡ ಜಲ್ಲಿಕಟ್ಟು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಇಂದೂ ಕೂಡ ಓರ್ವ ಸ್ಪರ್ಧಿಗೆ ಗಾಯ, ಆಸ್ಪತ್ರೆಗೆ ದಾಖಲು
ಇನ್ನು ತಿರುಚ್ಚಿಯಲ್ಲಿ ಇಂದು ನಡೆದ ಜಲ್ಲಿಕಟ್ಟು ಆಚರಣೆ ವೇಳೆ 19 ವರ್ಷದ ಓರ್ವ ಸ್ಪರ್ಧಿ ಆರೋಕ್ಕಿಯಾ ಸ್ವಾಮಿ ಎಂಬಾತನಿಗೆ ಗಾಯವಾಗಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಬೇಕು ಮತ್ತು ಜಲ್ಲಿಕಟ್ಟು ಸಂಬಂಧ ಶಾಶ್ವತ ಕಾನೂನು ರಚಿಸಬೇಕು ಎಂದು ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ  ಸರ್ಕಾರದ ಸುಗ್ರೀವಾಜ್ಞೆ ತಂದು ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಿತ್ತು. ಅಲ್ಲದೆ ವಿಶೇಷ ಅಧಿವೇಶನ ಕರೆದು ಜಲ್ಲಿಕಟ್ಟು ಕಾಯ್ದೆಯನ್ನು ಜಾರಿಗೆ ತಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com