

ಕೊಚ್ಚಿ: ಪತಿಯ ಇಬ್ಬರು ಸ್ನೇಹಿತರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಚ್ಚಿಯ ಮಾರಾಡು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪತಿ ಮನೆಯಲ್ಲಿಲ್ಲದ ವೇಳೆ ಮನೆಗೆ ಬಂದ ಅವರ ಇಬ್ಬರು ಸ್ನೇಹಿತರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳಿ ದೂರಿದ್ದಾಳೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸರು, 39 ವರ್ಷದ ಸಂತ್ರಸ್ತ ಮಹಿಳೆಯ ಪತಿ ವ್ಯಾಪಾರಿಯಾಗಿದ್ದಾನೆ. ಆತ ಮನೆಯಲ್ಲಿ ಇಲ್ಲದ ವೇಳೆಯನ್ನು ನೋಡಿಕೊಂಡು ದುಷ್ಕರ್ಮಿಗಳು ಮನೆಗೆ ಬಂದು ಪತ್ನಿ ಕೈಗಳನ್ನು ಕಟ್ಟಿ ಹಾಕಿ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕೂಗಲು ಆರಂಭಿಸಿದ್ದು, ಆಗ ಓರ್ವ ತನ್ನ ಬಳಿ ಇದ್ದ ಗನ್ ಅನ್ನು ಆಕೆಯ ಬಾಯಿಗೆ ಇಟ್ಟು ಕೂಗಿ ಕೊಂಡರೆ ಶೂಟ್ ಮಾಡುವುದಾಗಿ ಹೇಳಿ ಬೆದರಿಕೆ ಹಾಕಿದ್ದಾನೆ. ಬಳಿಕ ಅತ್ಯಾಚಾರ ಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮಹಿಳೆ ಮತ್ತು ಆಕೆಯ ಕುರಿತಂತೆ ಮಾಧ್ಯಮಗಳಿಗೆ ಹೆಚ್ಚೇನೂ ಮಾಹಿತಿ ನೀಡದ ಪೊಲೀಸರು ಪ್ರಕರಣವನ್ನು ಗೌಪ್ಯವಾಗಿ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಅಂತೆಯೇ ಮಹಿಳೆ ದೂರು ನೀಡಿರುವ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.