
ನವದೆಹಲಿ: ಕೇರಳದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಇ.ಅಹಮದ್ ಅವರು ಇಹಲೋಕ ತ್ಯಜಿಸಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂತಾಪ ಸೂಚಿಸಿದ್ದಾರೆ.
ಇ.ಅಹಮದ್ ಅವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇ.ಅಹಮದ್ ಅವರ ಅಗಲಿಕೆ ನೋವನ್ನು ತಂದಿದೆ. ಅಹಮದ್ ಅವರು ಹಿರಿಯ ರಾಜಕೀಯ ನಾಯಕರಾಗಿದ್ದು, ದೇಶಕ್ಕಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ಅಹಮದ್ ಅವರಿಗೆ ಶ್ರದ್ಧಾಂಜನಿಯನ್ನು ಸಲ್ಲಿಸುತ್ತಿದ್ದೇನೆಂದು ಹೇಳಿದ್ದಾರೆ.
ಐಯುಎಂಎಲ್ ನಾಯಕ ಅಹಮದ್ ಅವರು ಕೇರಳ ರಾಜ್ಯದ ಪ್ರಗತಿಗಾಗಿ ಸತತವಾಗಿ ಶ್ರಮಪಡುತ್ತಿದ್ದರು. ಪಶ್ಚಿಮ ಏಷ್ಯಾದ ಭಾರತದೊಂದಿಗಿನ ಸಂಬಂಧದಲ್ಲಿ ಅಹಮದ್ ಅವರ ಪಾತ್ರ ಅಗಾದವಾದುದು. ಮುಸ್ಲಿಂ ಸಮುದಾಯ ಸಬಲೀಕರಣಕ್ಕಾಗಿದ್ದ ಅಹಮದ್ ಅವರ ಶ್ರಮ ಸದಾ ನೆನಪಿನಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಸಂಸತ್ತಿನ ಬಜೆಟ್ ಅಧಿವೇಶನ ಆರಂಭಗೊಂಡಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು. ಭಾಷಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಇ. ಅಹ್ಮದ್ ಅವರು ದಿಢೀರನೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಹಮದ್ ಅವರಿಗೆ ಹೃದಯ ಸ್ತಂಭನ ಎದುರಾಗಿತ್ತೆಂದು ಹೇಳಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧರಾಗಿದ್ದಾರೆ.
ಐಯುಎಂಎಲ್ ನ ರಾಷ್ಟ್ರೀಕ ಅಧ್ಯಕ್ಷರಾಗಿರುವ 78 ವರ್ಷದ ಇ. ಆಹ್ಮದ್ ಅವರು ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ವಿದೇಶಾಂಕ ಸಚಿವಾಲಯದ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಕೇರಳದ ಮಲ್ಲಪ್ಪುರಂ ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದರು.
ರಾಹುಲ್ ಗಾಂಧಿ ಸಂತಾಪ
ಅಹಮದ್ ಅವರ ಅಲಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದು, ಅಹಮದ್ ಅವರು ಗೌರವ ಹಾಗೂ ಸಮರ್ಪಣೆಯ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆ ಸಾಕಷ್ಟು ನೋವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರೂ ಕೂಡ ಸಂತಾಪವನ್ನು ಸೂಚಿಸಿದ್ದು, ಮಾಜಿ ಸಚಿವ ಅಹ್ಮದ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವಹ ಆತ್ಮಕ್ಕೆ ಶಾಂತಿ ಕೋರುತ್ತೇನೆಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೂ ಕೂಡ ಸಂತಾಪವನ್ನು ಸೂಚಿಸಿದ್ದು, ಅತ್ಯುತ್ತಮ ಸಂಸದರೊಬ್ಬರನ್ನು ಭಾರತ ಇಂದು ಕಳೆದುಕೊಂಡಿದೆ. ಕೇರಳದ ಪ್ರೀತಿ ಪಾತ್ರರಾಗಿದ್ದ ನಾಯಕ ಪ್ರಜಾಪ್ರಭುತ್ವವಾದಿಯಾಗಿದ್ದರು. ದೇಶದ ಸೇವೆ ಬಗ್ಗೆ ಅವರಲ್ಲಿದ್ದ ಬದ್ಧತೆ ದೇಶದ ಯುವ ಜನಾಂಗಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
Advertisement