ಆಧಾರರಹಿತ ಕಾರಣಗಳಿಗಾಗಿ ಈ ಕೇಸಿನಲ್ಲಿ ತಮ್ಮ ಪುತ್ರ ತೇಜಸ್ವಿ ಮತ್ತು ಪತ್ನಿ ರಾಬ್ರಿಯನ್ನು ಎಳೆದು ತಂದದ್ದಕ್ಕಾಗಿ ಕೂಡ ಲಾಲೂ ಪ್ರಸಾದ್ ಯಾದವ್ ಆಕ್ರೋಶ ವ್ಯಕ್ತಪಡಿಸಿದರು. ಹೊಟೇಲ್ ನ ಗುತ್ತಿಗೆ ನೀಡಿದ ಸಂದರ್ಭದಲ್ಲಿ ತೇಜಸ್ವಿ ಅಪ್ರಾಪ್ತನಾಗಿದ್ದ. ರಾಬ್ರಿ ಕೂಡ ಸಾರ್ವಜನಿಕವಾಗಿ ಪರಿಚಯದ ವ್ಯಕ್ತಿಯಾಗಿರಲಿಲ್ಲ. ತಮ್ಮ ನಿವಾಸದ ಮೇಲೆ ಸಿಬಿಐ ನಡೆಸಿದ ದಾಳಿಗೆ ಸಂಬಂಧಪಟ್ಟಂತೆ ಸಿಬಿಐಯಿಂದ ದಾಸ್ತಾನು ಪಟ್ಟಿಯನ್ನು ಕೇಳಿದ್ದೇನೆ. ದಾಳಿಗೂ ಮುನ್ನ ಸಿಬಿಐ ಅಧಿಕಾರಿಗಳ ಜೊತೆ ಮಾತನಾಡಿದ್ದು ಇದೊಂದು ಶೋಧ ಕಾರ್ಯಾಚರಣೆಯಷ್ಟೆ ಎಂದು ಹೇಳಿದರು. ಅದರಂತೆ ನಾನು ನನ್ನ ಕುಟುಂಬದವರಿಗೆ ತನಿಖೆಗೆ ಅಧಿಕಾರಿಗಳ ಕಾರ್ಯಾಚರಣೆಗೆ ಸಹಕರಿಸುವಂತೆ ಹೇಳಿದ್ದೇನೆ ಎಂದರು.
ಇಂದು ಬೆಳಗ್ಗೆ ರಾಂಚಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಅಧಿಕ ಲಾಭವುಂಟಾಯಿತು. ಆದರೆ ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿದರು.
ಐಆರ್ ಸಿಟಿಸಿಗೆ ಹೊಟೇಲ್ ಗಳ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಿಬಿಐ 12 ಕಡೆಗಳಲ್ಲಿ ದಾಳಿ ನಡೆಸಿ ಶೋಧ ಮಾಡಿದೆ.
ಟಾಟಾ ಕಂಪೆನಿ ಮೂಲದ ಹೊಟೇಲ್ ಗಳಿಗೆ ರಾಂಚಿ ಮತ್ತು ಪುರಿ ಹೊಟೇಲ್ ಗಳಲ್ಲಿ ಜವಬ್ದಾರಿ ನೀಡಲಾಗಿದೆ. ಇದೇ ಯೋಜನೆಯಡಿ ದೆಹಲಿ ಮೂಲದ ಹೊಟೇಲ್ 1 ಕೋಟಿ ರೂಪಾಯಿಯನ್ನು ಅನುಮತಿ ಶುಲ್ಕವಾಗಿ ರೈಲ್ವೆ ಇಲಾಖೆಗೆ ನೀಡಿದೆ ಎಂದು ಲಾಲೂ ಪ್ರಸಾದ್ ಯಾದವ್ ತಿಳಿಸಿದರು.