

ಶ್ರೀನಗರ: ಅಮರನಾಥ್ ಯಾತ್ರಾರ್ಥಿಗಳ ದಾಳಿ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನದ ಯೋಧರಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚಾಗುತ್ತಿದ್ದು, ಬುಧವಾರ ಕುಪ್ವಾರದದಲ್ಲಿ ಪಾಕ್ ಸೈನಿಕರು ಭಾರತೀಯ ಪೋಸ್ಟ್ ಗಳತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಭಾರತೀಯ ಸೇನಾ ಪಡೆ ಯೋಧರು ಬದ್ಗಾಮ್ ನಲ್ಲಿ ಅಕ್ರಮವಾಗಿ ಗಡಿ ಒಳನುಸುಳಲ ಪ್ರಯತ್ನಿಸುತ್ತಿದ್ದ ಮೂವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಇಂದು ಭಾರತೀಯ ಪೋಸ್ಟ್ ಗಳತ್ತ ಪಾಕಿಸ್ತಾನ ಸೈನಿಕರು ಸತತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಪರಿಣಾಮ ಇಂದು ಕುಪ್ವಾರದಲ್ಲಿ ಪಹರೆ ನಡೆಸುತ್ತಿದ್ದ ಇಬ್ಬರು ಸೈನಿಕರು ಪಾಕ್ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಪಾಕಿಸ್ತಾನ ಬರೊಬ್ಬರಿ 23 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಒಂದು ಬಾರಿ ಪಾಕಿಸ್ತಾನದ ಬ್ಯಾಟ್ ಉಗ್ರರು ದಾಳಿ ಮಾಡಿದ್ದಾರೆ. ಅಂತೆಯೇ ಎರಡು ಬಾರಿ ಉಗ್ರರು ಗಡಿ ಒಳ ನುಸುಳಲು ಪ್ರಯತ್ನಿಸಿದ್ದು, ಇದರಿಂದಾಗಿ ಒಟ್ಟು ನಾಲ್ಕು ನಾಗರಿಕರು, ಮೂವರು ಸೈನಿಕರು ಸಾವನ್ನಪ್ಪಿ ಒಟ್ಟು 12 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.