ಮಣಿಪುರ: ಭಾರಿ ಭೂ ಕುಸಿತದಿಂದಾಗಿ ನಾಗಾಲ್ಯಾಂಡ್ ಮತ್ತು ಮಣಿಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ -2ರ ಪ್ರಮುಖ ಭಾಗ ಕೊಚ್ಚಿ ಹೋಗಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ನಾಗಾಲ್ಯಾಂಡ್ ನ ಕೊಹಿಮಾ ಜಿಲ್ಲೆಯ ವಿಶ್ವೆಮಾ ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ಈ ಭೂ ಕುಸಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭೂ ಕುಸಿತದಿಂದಾಗಿ ಸುಮಾರು 70 ಮೀಟರ್ ಗಳಷ್ಟು ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ-2 ಮಣಿಪುರದ ಜೀವನಾಡಿಯಾಗಿದ್ದು, ಎಲ್ಲಾ ಸರಕು ಸಾಗಾಣೆ ವಾಹನ, ಪ್ರಯಾಣಿಕ ವಾಹನ ಸೇರಿದಂತೆ ಇತರೆ ಎಲ್ಲಾ ವಾಹನಗಳು ಈ ರಸ್ತೆ ಮೂಲಕವೇ ಮಣಿಪುರ ತಲುಪುತ್ತವೆ.
ಭೂ ಕುಸಿತದ ನಂತರ ಗ್ರಾಮಸ್ಥರು ತಾತ್ಕಾಲಿಕ ಪಾದಾಚಾರಿ ಮಾರ್ಗವೊಂದನ್ನು ನಿರ್ಮಿಸಿದ್ದು, ಅದರ ಮೂಲಕವೇ ರಸ್ತೆ ದಾಟುತ್ತಿದ್ದಾರೆ.