ಶಾಲೆಗಳ ಮೇಲೆ ಗುಂಡಿನ ದಾಳಿ ನಡೆಸುವುದು ಯಾವುದೇ ಸೇನೆಗೆ ಶೋಭೆಯಲ್ಲ: ಪಾಕ್ ಡಿಜಿಎಂಒಗೆ ಭಾರತ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ಕೇಳೆ ಬಳಿ ನಾಗರೀಕರು ಹಾಗೂ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದ್ದು, ಯಾವುದೇ ಸೇನೆ ಶಾಲಾ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಎಂದು ಪಾಕಿಸ್ತಾನದ ಸೇನಾ...
ಭಾರತೀಯ ಸೇನೆಯ ಡಿಜಿಎಂ ಎ.ಕೆ. ಭಟ್
ಭಾರತೀಯ ಸೇನೆಯ ಡಿಜಿಎಂ ಎ.ಕೆ. ಭಟ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ಕೇಳೆ ಬಳಿ ನಾಗರೀಕರು ಹಾಗೂ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದ್ದು, ಶಾಲಾ ಮಕ್ಕಳನ್ನು ಮೇಲೆ ಗುಂಡಿನ ದಾಳಿ ನಡೆಸುವುದು ಯಾವುದೇ ಸೇನೆಗೆ ಶೋಭೆಯಲ್ಲ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಭಾರತ ಗುರುವಾರ ಹೇಳಿದೆ. 
ಗಡಿಯಲ್ಲಿ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ಭಾರತೀಯ ಸೇನೆಯ ಡಿಜಿಎಂ ಎ.ಕೆ. ಭಟ್ ಅವರು, ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಸಾಹಿರ್ ಷಂಶದ್ ಮಿರ್ಜಾ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಉಭಯ ರಾಷ್ಟ್ರಗಳ ಡಿಜಿಎಂಒ ಗಳು ಮಾತುಕತೆ ನಡೆಸಿರುವುದನ್ನು ಸೇನಾ ವಕ್ತಾರ ಕರ್ನಲ್, ಅಮನ್ ಆನಂದ್ ಅವರು ಖಚಿತಪಡಿಸಿದ್ದಾರೆ. 
ಮಾತುಕತೆ ವೇಳೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿರುವ ಭಟ್ ಅವರು, ನಿಮ್ಮ ಸೇನೆಗೆ ನಿಯಂತ್ರಣದಲ್ಲಿಟ್ಟುಕೊಳ್ಳಿ ಹಾಗೂ ಮಹಾಪಾತಕ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಸಿದ್ದಾರೆ. ರಜೌರಿ ಜಿಲ್ಲೆಯಲ್ಲಿರುವ ನೌಶೆರಾ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಾಗರಿಕರು ಹಾಗೂ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ. 
ಶಾಲಾ ಮಕ್ಕಳ ಮೇಲೆ ಗುಂಡು ಹಾರಿಸುವ ಕೆಟ್ಟ ವರ್ತನೆಯನ್ನು ಯಾವುದೇ ಸೇನೆ ಮಾಡುವುದಿಲ್ಲ. ಭಾರತೀಯ ಸೇನೆ ವೃತ್ತಿಪರ ಸೇನೆಯಾಗಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ದಾಳಿಗಳನ್ನು ತಪ್ಪಿಸಲು ಎಲ್ಲಾ ರೀತಿ ಎಚ್ಚರ ವಹಿಸುತ್ತದೆ. ಪಾಕಿಸ್ತಾನ ಕೂಡ ಇದೇ ರೀತಿ ನಡೆದುಕೊಳ್ಳಬೇಕೆಂದು ಭಾರತ ಬಯಸುತ್ತದೆ ಎಂದು ತಿಳಿಸಿದ್ದಾರೆಂದು ಅಮನ್ ಅವರು ತಿಳಿಸಿದ್ದಾರೆ. 
ಗಡಿಯಲ್ಲಿರುವ ಕಟ್ಟಡವೊಂದರಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿದ್ದರು. ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಕಟ್ಟಡದಿಂದ ಹೊರ ಬರಲಾರದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಭಾರತೀಯ ಸೇನೆ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ರಕ್ಷಣೆ ಮಾಡಿತ್ತು ಅಲ್ಲದೆ, ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಇಬ್ಬರು ಉಗ್ರರನ್ನು ಸದೆಬಡಿದಿತ್ತು. ಗುಂಡಿನ ಚಕಮಕಿ ವೇಳೆ ಇಬ್ಬರು ಭಾರತೀಯ ಯೋಧರೂ ಕೂಡ ಹುತಾತ್ಮರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com