ನೀವೇ ನಮ್ಮ ಪ್ರಧಾನಿಯಾಗಿದ್ದರೆ ನಮ್ಮ ದೇಶ ಬದಲಾಗುತ್ತಿತ್ತು: ಸುಷ್ಮಾರನ್ನು ಕೊಂಡಾಡಿದ ಪಾಕ್ ಪ್ರಜೆ

ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಬಯಸುತ್ತಿರುವ ಪಾಕಿಸ್ತಾನ ಪ್ರಜೆಗೆ ವೀಸಾ ನೀಡುವಂತೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಹೇಳಿದ್ದಾರೆ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಬಯಸುತ್ತಿರುವ ಪಾಕಿಸ್ತಾನ ಪ್ರಜೆಗೆ ವೀಸಾ ನೀಡುವಂತೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಹೇಳಿದ್ದಾರೆ. 
ಪಾಕಿಸ್ತಾನದಲ್ಲಿರುವ ಪ್ರಜೆಯೊಬ್ಬರು ಗಂಭೀರವಾದ ರೋಗದಿಂದ ಬಳಲುತ್ತಿದ್ದು, ಶೀಘ್ರಗತಿಯಲ್ಲಿ ಭಾರತದಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ವೀಸಾ ಕುರಿತಂತೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಿಮ್ಮ ಅನುಮತಿ ಬೇಕೆಂದು ಹೇಳುತ್ತಿದ್ದಾರೆಂದು ಹಿಜಾಬ್ ಆಸಿಫ್ ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸುಷ್ಮಾ ಅವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. 
ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ ರೋಗಿಗೆ ಕೂಡಲೇ ವೀಸಾ ನೀಡುವಂತೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಮ್ಬಾವಾಲೆಯವರಿಗೆ ಸೂಚನೆ ನೀಡಿದ್ದಾರೆ. 
ಇದೇ ವೇಳೆ ಪಾಕಿಸ್ತಾನದ ನಾಗರಿಕರಿಗೆ ವೈದ್ಯಕೀಯ ವೀಸಾ ಸಿಗಬೇಕಾದರೆ ಸರ್ತಾಜ್ ಅಜೀಜ್ ಅವರ ಶಿಫಾರಸ್ಸು ಅಗತ್ಯ ಎಂಬ ನಿಯಮದ ಕುರಿತಂತೆ ಪರೋಕ್ಷವಾಗಿ ತಿರುಗೇಟು ನೀಡಿರುವ ಸುಷ್ಮಾ ಅವರು, ಇಂತಹ ಗಂಭೀರ ಪ್ರಕಣಗಳಿಗೂ ಸರ್ತಾಜ್ ಅಜೀಜ್ ಸಾಹೇಬರು ವೀಸಾ ಶಿಫಾರಸ್ಸು ಮಾಡಲು ನಿರಾಕರಿಸಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಜಾಬ್ ಅಸೀಫ್ ಅವರು, ನಮ್ಮಲ್ಲೊಬ್ಬರು ಸರ್ತಾಜ್ ಅಜೀಜ್ ಅಂತ ವಿದೇಶಾಂಗ ಸಚಿವರಿದ್ದಾರೆ. ಅವರು ಬದುಕಿದ್ದಾರೋ ಅಥವಾ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಟೀಕೆ ಮಾಡಿದ್ದಾರೆ. 

ನಂತರ ಸುಷ್ಮಾ ಸ್ವರಾಜ್ ಅವರನ್ನು ಕೊಂಡಾಡಿರುವ ಆಸಿಫ್, ನಿಮ್ಮನ್ನು ಏನೆಂದು ಕರೆಯಬೇಕು? ಅತ್ಯುನ್ನತ ಮಹಿಳೆ ಎಂದು ಕರೆಯಬೇಕೋ ಅಥವಾ ದೇವರು ಎಂದು ಕರೆಯಬೇಕೋ? ನಿಮ್ಮ ಔದಾರ್ಯತೆಯನ್ನು ವಿವರಿಸಲು ಯಾವ ಪದಗಳೂ ಇಲ್ಲ. ನಿಮ್ಮನ್ನು ಹೊಗಳುವುದನ್ನು ನಿಲ್ಲಿಸಲು ಆಗುತ್ತಿಲ್ಲ. ನನ್ನ ಹೃದಯ ನಿಮಗೆ ಸೇರಿದ್ದು, ನಿಮಗಾಗಿ ಬಡಿಯುತ್ತಿದೆ. ಪಾಕಿಸ್ತಾನ ಯಾವ ಅರ್ಹತೆಯನ್ನೂ ಹೊಂದಿಲ್ಲ. ನಿಮ್ಮ ಮೇಲಿನ ಪ್ರೀತಿ ಹಾಗೂ ಗೌರವ ಹೆಚ್ಚಿದೆ. ನಮ್ಮ ದೇಶದಲ್ಲಿ ನೀವು ಪ್ರಧಾನಮಂತ್ರಿಗಳಾಗಿದ್ದರೆ, ನಮ್ಮ ದೇಶ ಎಷ್ಟೋ ಬದಲಾಗುತ್ತಿತ್ತು ಎಂದು ಆಸಿಫ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com