ಮಾತುಕತೆ ಮೂಲಕ ಭಾರತ-ಪಾಕ್ ನಡುವಿನ ಸಮಸ್ಯೆಗಳನ್ನು ಬಗೆಹರಿಸಬಹುದು: ಅಬ್ದುಲ್ ಬಸಿತ್
ಮಾತಕತೆ ನಡೆಸುವುದರ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಅವರು ಶನಿವಾರ ಹೇಳಿದ್ದಾರೆ...
ನವದೆಹಲಿ: ಮಾತಕತೆ ನಡೆಸುವುದರ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಅವರು ಶನಿವಾರ ಹೇಳಿದ್ದಾರೆ.
ಭಾರತದ ಪಾಕಿಸ್ತಾನ ರಾಯಭಾರಿಯಾಗಿರುವ ಅಬ್ದುಲ್ ಬಸಿತ್ ಅವರ ಅಧಿಕಾರದ ಅವಧಿ ನಾಳೆಗೆ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ನಿನ್ನೆ ಭಾರತೀಯ ಅಂತರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ.
ಯಾವುದೇ ಅಡೆತಡೆಗಳಿಲ್ಲದೆ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಮಾತುಕತೆ ನಡೆಸುವುದರಿಂದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ಪಠಾಣ್ ಕೋಟ್ ದಾಳಿಯಿಂದ ಹಿಡಿದು ಕುಲ್'ಭೂಷಣ್ ಜಾಧವ್ ಪ್ರಕರಣದ ವರೆಗಿನ ಎಲ್ಲಾ ವಿಚಾರಗಳ ಕುರಿತಂತೆ ಭಾರತ ಮಾತುಕತೆ ನಡೆಸುವುದು ಅಗತ್ಯವಿದೆ. ಕೊಟ್ಟು ಮತ್ತು ತೆಗೆದುಕೊಳ್ಳುವ ಸೂತ್ರವನ್ನು ಪಾಲಿಸುವ ಮೂಲಕ ಸಂಧಾನ ಮಾಡಿಕೊಳ್ಳಬೇಕಿದೆ. ಪಠಾಣ್ ಕೋಟ್ ದಾಳಿ ಸಂಬಂಧ ಪಾಕಿಸ್ತಾನದ ಜೊತೆಗೆ ಭಾರತ ಮಾತುಕತೆ ನಡೆಸಿದರೆ ತನಿಖೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವಿರುದ್ದ ಕಿಡಿಕಾರಿರುವ ಅವರು, ಪಾಕಿಸ್ತಾನದಲ್ಲಿ ನಾವು ಕಾನೂನುಬದ್ಧ ಸರ್ಕಾರವನ್ನು ಹೊಂದಿದ್ದೇವೆ. ಕೆಲ ವಿಚಾರಗಳ ಬಗೆಗಿನ ಚರ್ಚೆಗಳು ಕೆಲವೊಮ್ಮೆ ಕೃತಕ ತಡೆಗೋಡೆಯನ್ನು ನಿರ್ಮಾಣ ಮಾಡುತ್ತವೆ. ಮಾತುಕತೆಗೂ ಮುನ್ನವೇ ಚರ್ಚೆಯಿಂದ ಹೊರ ಹೋಗುವಂತೆ ಮಾಡುತ್ತವೆ ಎಂದಿದ್ದಾರೆ.