ಬದ್ರಿನಾಥ್ ನಲ್ಲಿ ಯಾತ್ರಿಕರ ಹೆಲಿಕಾಪ್ಟರ್ ಪತನ; ಓರ್ವ ಇಂಜಿನಿಯರ್ ಸಾವು!

ಪವಿತ್ರಾ ಯಾತ್ರ ಸ್ಥಳ ಬದ್ರಿನಾಥ್ ನಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಶನಿವಾರ ಪತನವಾಗಿದ್ದು, ಘಟನೆಯಲ್ಲಿ ಚಾಪರ್ ನಲ್ಲಿದ್ದ ಓರ್ವ ಇಂಜಿನಿಯರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಪತನವಾದ ಕಾಪ್ಟರ್
ಪತನವಾದ ಕಾಪ್ಟರ್
Updated on: 

ಬದ್ರಿನಾಥ್: ಪವಿತ್ರಾ ಯಾತ್ರ ಸ್ಥಳ ಬದ್ರಿನಾಥ್ ನಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಶನಿವಾರ ಪತನವಾಗಿದ್ದು, ಘಟನೆಯಲ್ಲಿ ಚಾಪರ್ ನಲ್ಲಿದ್ದ ಓರ್ವ ಇಂಜಿನಿಯರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಸೇನಾ ಮೂಲಗಳ ಪ್ರಕಾರ ಪತನವಾದ ಚಾಪರ್ ಕ್ರೆಸ್ಟಾಲ್ ಏವಿಯೇಷನ್‌ ಗೆ ಸೇರಿದ್ದು, ಆಗಸ್ಟಾ 119 ಸರಣಿಯ ಹೆಲಿಕಾಪ್ಟರ್ ಆಗಿದೆ ಎಂದು ತಿಳಿದುಬಂದಿದೆ. ಚಾಪರ್ ನಲ್ಲಿ ಒಟ್ಟು 8 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.  ಇದರಲ್ಲಿ ಐವರು ಪ್ರಯಾಣಿಕರು, ಇಬ್ಬರು ಪೈಲಟ್‌ ಗಳು ಹಾಗೂ ಓರ್ವ ಇಂಜಿನಿಯರ್ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಹೆಲಿಕಾಪ್ಟರ್‌ನ ಇಂಜಿನಿಯರ್ ಮೃತಪಟ್ಟರೆ, ಇಬ್ಬರು ಪೈಲಟ್‌ ಗಳು ಸಣ್ಣಪುಟ್ಟ  ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಇಂಜಿನಿಯರ್‌ ನನ್ನು ಅಸ್ಸಾಂನ ವಿಕ್ರಮ್ ಲಾಂಬಾ ಎಂದು ಗುರುತಿಸಲಾಗಿದೆ.

ಹೆಲಿಕಾಪ್ಟರ್ ಬಿದ್ದ ರಭಸಕ್ಕೆ ಚಾಪರ್ ನ ರೆಕ್ಕೆಗಳು ತುಂಡರಿಸಿದ್ದು, ಕಾಪ್ಟರ್ ಪ್ರಮುಖ ಭಾಗಗಳು ಜಖಂಗೊಂಡಿವೆ.

ಇನ್ನು ಐವರು ಪ್ರಯಾಣಿಕರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದು, ಎಲ್ಲ ಐದು ಮಂದಿಯನ್ನು ಹರಿದ್ವಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಪತನಗೊಂಡ ಬಗ್ಗೆ ತನಿಖೆ ಆರಂಭವಾಗಿದೆ  ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com