ಹಿಂದಿ ರಾಷ್ಟ್ರ ಭಾಷೆ, ಹಿಂದಿ ಇಲ್ಲದೆ ದೇಶ ಮುಂದುವರೆಯಲು ಸಾಧ್ಯವೇ ಇಲ್ಲ: ವೆಂಕಯ್ಯ ನಾಯ್ಡು

ಹಿಂದಿ ರಾಷ್ಟ್ರ ಭಾಷೆಯಾಗಿದ್ದು, ಹಿಂದಿ ಭಾಷೆಯಿಲ್ಲದೆಯೇ ದೇಶ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು

ಅಹ್ಮದಾಬಾದ್: ಹಿಂದಿ ರಾಷ್ಟ್ರ ಭಾಷೆಯಾಗಿದ್ದು, ಹಿಂದಿ ಭಾಷೆಯಿಲ್ಲದೆಯೇ ದೇಶ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ. 

ಹಿಂದಿ ಹೇರಿಕೆ ಕುರಿತಂತೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹಿಂದಿ ರಾಷ್ಟ್ರ ಭಾಷೆಯಾಗಿದ್ದು, ಹಿಂದಿಯಿಲ್ಲದೆಯೇ ಭಾರತ ದೇಶ ಮುಂದುವರೆಯಲು ಸಾಧ್ಯವಿಲ್ಲ. ಜನರು ಆಂಗ್ಲ ಮಾಧ್ಯಮಕ್ಕೆ ಮೊದಲು ಆದ್ಯತೆ ನೀಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ನಾನು ಬ್ರಿಟೀಷರ ವಿರುದ್ಧವಿದ್ದೇನೆಯೇ ಹೊರತು ಅವರ ಭಾಷೆಯ ವಿರುದ್ಧವಲ್ಲ. ನಾವು ಎಲ್ಲಾ ಭಾಷೆಗಳನ್ನು ಕಲಿಯಬೇಕು. ಆದರೆ, ಇಂಗ್ಲೀಷ್ ಕಲಿಕೆ ಕುರಿತ ನಮ್ಮ ಆಲೋಚನೆಗಳು ಬದಲಾಗುತ್ತಿವೆ. ಇದು ತಪ್ಪು. ಇದು ದೇಶದ ಹಿತಾಸಕ್ತಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ. 

ಜನರು ತಮ್ಮ ತಾಯಿ ಭಾಷೆ ಕಲಿಯುವುದು ಅಗತ್ಯವಾಗಿದೆ. ಇಂಗ್ಲೀಷ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಅದು ನಮ್ಮ ಸಾಂಸ್ಕೃತಿಕ ಪರಂಪರೆ ಮೇಲೆ ಕರಿನೆರಳು ಬೀಳುವಂತೆ ಮಾಡುತ್ತದೆ. ದೇಶದಲ್ಲಿರುವ ಬಹುತೇಕ ಜನಸಂಖ್ಯೆ ಹಿಂದಿ ಭಾಷೆಯನ್ನೇ ಮಾತನಾಡುತ್ತಾರೆ. ಹಿಂದಿ ಕಲಿಯುವುದು ಅಗತ್ಯವಾಗಿದೆ. ಇದಕ್ಕೂ ಮುನ್ನ ನಾವು ನಮ್ಮ ತಾಯಿನಾಡು ಭಾಷೆಯನ್ನು ಕಲಿಯುವುದು ಮುಖ್ಯವಾಗುತ್ತದೆ. 

ಉದ್ಯೋಗಾವಕಾಶಗಳಿಗಾಗಿ ಜನರು ಇಂಗ್ಲೀಷ್ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ದುರಾದೃಷ್ಟಕರ ಸಂಗತಿ. ಈ ಬಗ್ಗೆ ದೇಶ ಚರ್ಚೆ ನಡೆಸಬೇಕಿದೆ. ನಮ್ಮ ತಾಯಿನಾಡು ಭಾಷೆಗೆ ನಾವು ಹೆಚ್ಚು ಪ್ರೋತ್ಸಾಹ ನೀಡಬೇಕು. ಇದರೊಂದಿಗೆ ಹಿಂದಿ ಭಾಷೆಗೂ ನೀಡಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com