ನವದೆಹಲಿ: ಭಾರತೀಯ ಜನತಾ ಪಕ್ಷ ಮಣಿಪುರ ಮತ್ತು ಗೋವಾಗಳಲ್ಲಿ ಸರ್ಕಾರ ರಚನೆಗೆ ಹೊರಟಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ ಪಕ್ಷ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎರಡನೇ ಸ್ಥಾನ ಗಳಿಸಿದ ಪಕ್ಷಕ್ಕೆ ಸರ್ಕಾರ ರಚಿಸಲು ಯಾವುದೇ ಅಧಿಕಾರವಿಲ್ಲ. ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ಚುನಾವಣೆಯನ್ನು ಕದಿಯುತ್ತಿದೆ ಎಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.
ಅವರು ನಿನ್ನೆ ಪ್ರಧಾನಿ ಮೋದಿಯವರನ್ನು ಅತ್ಯಂತ ಪ್ರಬಲ ರಾಜಕೀಯ ನಾಯಕ ಎಂದು ಒಪ್ಪಿಕೊಂಡಿದ್ದರು.
ಬಹುತೇಕ ಶಾಸಕರ ಬೆಂಬಲದಿಂದ ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ಸರ್ಕಾರ ರಚಿಸಲು ಹೊರಟಿದೆ. ಗೋವಾದಲ್ಲಿ ಮನೋಹರ್ ಪರಿಕ್ಕರ್ ರಾಜ್ಯಪಾಲ ಮೃದುಲಾ ಸಿನ್ಹಾ ಅವರನ್ನು ನಿನ್ನೆ ಭೇಟಿ ಮಾಡಿದ್ದರು. ರಾಜ್ಯಪಾಲರು ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದು ಇನ್ನು 15 ದಿನಗಳೊಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ.
40 ಸೀಟುಗಳನ್ನು ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆ,ಸ್ 17 ಸ್ಥಾನಗಳಲ್ಲಿ ಗೆದ್ದಿದೆ. ಸರ್ಕಾರ ರಚಿಸಲು 21 ಸ್ಥಾನಗಳು ಬೇಕಾಗಿದ್ದು, ಬಿಜೆಪಿ 13 ಸ್ಥಾನಗಳನ್ನು ಪಡೆದಿದೆ. ಅನೇಕ ಸ್ಥಳೀಯ ಪಕ್ಷಗಳು ಬಿಜೆಪಿಗೆ ಬೆಂಬಲ ಸೂಚಿಸಿವೆ.
ಮಣಿಪುರದಲ್ಲಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 21 ಸ್ಥಾನಗಳನ್ನು ಗೆದ್ದಿದ್ದು, ಇತರ ಪಕ್ಷಗಳ 10 ಶಾಸಕರು ಬೆಂಬಲ ನೀಡಿದ್ದಾರೆ. ಇಲ್ಲಿ ಕಾಂಗ್ರೆಸ್ 27 ಸ್ಥಾನಗಳನ್ನು ಗೆದ್ದುಕೊಂಡಿದೆ.