ರಾಮೇಶ್ವರಂ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪೊನ್ ರಾಧಾಕೃಷ್ಣನ್ ಅವರೊಂದಿಗಿನ ಮಾತುಕತೆ ಬಳಿಕ ತಮಿಳುನಾಡು ಮೀನುಗಾರರು ತಮ್ಮ ಪ್ರತಿಭಟನೆಯನ್ನು ಸೋಮವಾರ ಹಿಂಪಡೆದಿದ್ದಾರೆ.
ಈ ಹಿಂದೆ ತಮಿಳುನಾಡು ಮೀನುಗಾರನೊಬ್ಬನನ್ನು ಶ್ರೀಲಂಕಾ ನೌಕಾಪಡೆ ಗುಂಡಿಟ್ಟು ಹತ್ಯೆ ಮಾಡಿತ್ತು. ಇದಕ್ಕೆ ತಮಿಳುನಾಡು ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ. ಕಳೆದ 6 ದಿನಗಳಿಂದಲೂ ಸುಧೀರ್ಘವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಯವರ ಪರವಾಗಿ ನಿರ್ಮಲಾ ಸೀತಾರಾಮನ್ ಅವರು ಮೀನುಗಾರರ ಮನವೊಲಿಸಲು ಮಾತುಕತೆ ನಡೆಸಿದ್ದರು. ರಾಜತಾಂತ್ರಿಕತೆಯ ಮೂಲಕ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ಮೀನುಗಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.
ಸಚಿವರೊಂದಿಗಿನ ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೀನುಗಾರರು, ಹತ್ಯೆಯಾದ ಮೀನುಗಾರನ ಅಂತ್ಯ ಸಂಸ್ಕಾರವನ್ನು ನಾಳೆ ನಡೆಸಲಾಗುತ್ತದೆ. ಪ್ರಸ್ತುತ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆಂದು ಹೇಳಿದ್ದಾರೆ.