ಪಣಜಿ: ಮನೋಹರ್ ಪರಿಕ್ಕರ್ ನೇತೃತ್ವದ ಗೋವಾ ಬಿಜೆಪಿ ಸರ್ಕಾರ ಶುಕ್ರವಾರ ತನ್ನ ಚೊಚ್ಚಲ ಬಜೆಟ್ ಮಂಡಿಸಿದ್ದು, ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹಣಕಾಸು ಖಾತೆಯನ್ನು ಹೊಂದಿರುವ ಮನೋಹರ್ ಪರಿಕ್ಕರ್ ಅವರು ಇಂದು 2017-18ನೇ ಸಾಲಿನ ಬಜೆಟ್ ಮಂಡಿಸಿದರು. ಪ್ರಸಕ್ತ ಸಾಲಿನಲ್ಲಿ ಶೇ.11ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
ಗೋವಾ ಬಜೆಟ್ ಗಾತ್ರವನ್ನು ಈ ಬಾರಿ 14,694ರಿಂದ 16,270 ಕೋಟಿಗೆ ಹೆಚ್ಚಿಸಲಾಗಿದ್ದು, ಮಾತೃ ಭಾಷೆಗೆ ಪ್ರೋತ್ಸಾಹ ನೀಡಲು ಕೊಂಕಣಿ ಮತ್ತು ಮರಾಠಿ ಶಾಲೆಗಳಿಗೆ ಪರಿಕ್ಕರ್ ಅವರು 6 ಸಾವಿರ ಕೋಟಿ ರುಪಾಯಿ ಹೆಚ್ಚುವರಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.
ಸಾಮಾಜಿಕ ಕ್ಷೇತ್ರಕ್ಕೆ 900 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 475 ಕೋಟಿ, ಲೋಕೋಪಯೋಗಿ ಇಲಾಖೆಗೆ 1,900 ಕೋಟಿ ಹಾಗೂ ಬುಡಕಟ್ಟು ಕಲ್ಯಾಣಕ್ಕೆ 190 ಕೋಟಿ ರುಪಾಯಿ ನೀಡಲಾಗಿದೆ.