ಜಾಧವ್ ಗೆ ಗಲ್ಲು ಶಿಕ್ಷೆ ತಕ್ಷಣ ರದ್ದುಗೊಳಿಸಿ: ಅಂತಾರಾಷ್ಟ್ರೀಯ ಕೋರ್ಟ್ ಗೆ ಭಾರತದ ಒತ್ತಾಯ

ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರ ಮರಣದಂಡನೆ ಶಿಕ್ಷೆಗೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ...
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
ನವದೆಹಲಿ: ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರ ಮರಣದಂಡನೆ ಶಿಕ್ಷೆಗೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಇಂದು ಭಾರತ ಮತ್ತು ಪಾಕಿಸ್ತಾನ ವಾದ ಮಂಡಿಸಿವೆ. 
ಇಂದು ಬೆಳಗ್ಗೆ 90 ನಿಮಿಷಗಳ ಕಾಲ ಭಾರತ ತನ್ನ ವಾದ ಮಂಡಿಸಿತ್ತು. ಇದೀಗ ಪಾಕಿಸ್ತಾನ ತನ್ನ ವಾದ ಆರಂಭಿಸಿದೆ.
ಮಾನವ ಹಕ್ಕುಗಳು ವಿಶ್ವದ ಯಾವುದೇ ಕಡೆಯಲ್ಲಾದರೂ ಅತ್ಯಗತ್ಯವಾಗಿದ್ದು ಅದನ್ನು  ಪಾಕಿಸ್ತಾನ ಗಾಳಿಗೆ ತೂರಿದೆ. ಜಾಧವ್ ಅವರಿಗೆ ದೂತಾವಾಸ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ ಮನವಿಗೆ ಪಾಕಿಸ್ತಾನ ಜಾಣಕಿವುಡು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿತ್ತು.
ಪ್ರಸ್ತುತ ಸ್ಥಿತಿ ತೀವ್ರ ಕಳವಳಕಾರಿಯಾಗಿದ್ದು ಅದಕ್ಕಾಗಿ ನಾವು ಅಂತಾರಾಷ್ಟ್ರೀಯ ನ್ಯಾಯ ವೇದಿಕೆಯ ಮೊರೆ ಹೋದೆವು. ಜಾಧವ್ ಅವರ ಮತ್ತು ಭಾರತದ ಮೂಲಭೂತ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಜಾಧವ್ ಅವರನ್ನು ಅಕ್ರಮವಾಗಿ ಬಂಧಿಸಿ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಮುರಿದಿದೆ ಎಂದು ಭಾರತದ ಪರ ಹಿರಿಯ ವಕೀಲ ಹರೀಶ್ ಸಲ್ವೆ ವಿಚಾರಣೆ ವೇಳೆ ವಾದ ಮಂಡಿಸಿದರು.
ದೂತಾವಾಸ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಲು 2016 ಮಾರ್ಚ್ ನಿಂದ ಭಾರತ ಮನವಿ ಮಾಡುತ್ತಾ ಬಂದಿದೆ. ಆದರೆ ಪಾಕಿಸ್ತಾನ ಅದಕ್ಕೆ ಅವಕಾಶ ನೀಡಲೇ ಇಲ್ಲ ಎಂದು ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಸಲ್ವೆ ತಿಳಿಸಿದರು.
ಜಾಧವ್ ಅವರಿಗೆ ಪಾಕಿಸ್ತಾನದಲ್ಲಿ ಕಾನೂನು ನೆರವಿಗೆ ನಿರಾಕರಿಸಲಾಗಿದೆ. ಜಾಧವ್ ಅವರು ಮಿಲಿಟರಿ ಕಸ್ಟಡಿಯಲ್ಲಿದ್ದಾಗ ಒತ್ತಾಯಪೂರ್ವಕವಾಗಿ ಅವರಿಗೆ ಬೆದರಿಕೆಯೊಡ್ಡಿ ತಪ್ಪೊಪ್ಪಿಗೆ ಹೇಳಿಸಲಾಯಿತು. ನ್ಯಾಯಾಂಗ ನಿರ್ಧಾರ ಬರುವ ಮುನ್ನವೇ ಅವರನ್ನು ಗಲ್ಲಿಗೇರಿಸುವ ಬೆದರಿಕೆಯೊಡ್ಡಲಾಗಿತ್ತು ಎಂದು ಭಾರತ ವಾದ ಮಂಡಿಸಿದೆ.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ 4 ಮನವಿ ಮಾಡಿದ ಭಾರತ, ಮರಣದಂಡನೆ ಶಿಕ್ಷೆ ಕಾನೂನಿಗೆ ವಿರುದ್ಧ ಎಂದು ಘೋಷಿಸುವಂತೆ, ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಹಕ್ಕುಗಳ ಉಲ್ಲಂಘನೆ ಎಂದು ಪಾಕಿಸ್ತಾನದಿಂದ ಮರುಪಾವತಿ ಮಾಡಿಕೊಳ್ಳುವಂತೆ, ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸದಂತೆ ಮತ್ತು ಕುಲಭೂಷಣ್ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಕೂಡ ಭಾರತದ ಪರ ವಕೀಲರು ವಾದ ಮಂಡಿಸಿದ್ದಾರೆ.
ಇನ್ನೊಂದೆಡೆ, ಭಾರತಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಕೇಸಿನ ವಿಚಾರಣೆ  ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಅವರಿಗೆ ಮರಣದಂಡನೆ  ಶಿಕ್ಷೆಯನ್ನು ತಪ್ಪಿಸಲು ಭಾರತ ಸರ್ವರೀತಿಯಲ್ಲಿಯೂ ಪ್ರಯತ್ನಿಸಲಿದೆ ಎಂದು ಭಾರತ ಹೇಳಿದೆ.
ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಹಂಸ್ ರಾಜ್ ಅಹಿರ್, ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಭಾರತ ತನ್ನ ವಾದ ಮಂಡಿಸಿದ್ದು ಈ ಕೇಸಿನಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com