ಅಮಿತಾಬ್ ಬಚ್ಚನ್ ರಂತೆ ರಜನಿಕಾಂತ್ ತಲೆಯಲ್ಲಿ ಏನೂ ಇಲ್ಲ: ಮಾರ್ಕಂಡೇಯ ಕಾಟ್ಜು

ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಹಿರಿಯ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು...
ರಜನಿಕಾಂತ್ ಮತ್ತು ಮಾರ್ಕಂಡೇಯ ಕಾಟ್ಜು
ರಜನಿಕಾಂತ್ ಮತ್ತು ಮಾರ್ಕಂಡೇಯ ಕಾಟ್ಜು

ನವದೆಹಲಿ: ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಹಿರಿಯ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು  ರಜನಿಕಾಂತ್ ಅವರ ಕುರಿತಂತೆ ಕಿಡಿಕಾರಿದ್ದಾರೆ.

ರಜನಿಕಾಂತ್ ಅವರ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳ ಹಿನ್ನಲೆಯಲ್ಲಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿರುವ ಕಾಟ್ಜು ಅವರು, ರಜನಿಕಾಂತ್ ರಾಜಕೀಯ  ಪ್ರವೇಶಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಡತನ, ನಿರುದ್ಯೋಗ, ಆರೋಗ್ಯ, ರೈತರ ಸಮಸ್ಯೆ ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಬಳಿ ಉತ್ತರವಿಲ್ಲ. ಅಮಿತಾಬ್  ಬಚ್ಚನ್ ಅವರಂತೆ ರಜನಿ ಕಾಂತ್ ಮೆದುಳಿನಲ್ಲೂ ಏನೂ ಇಲ್ಲ ಎಂದು ಕಾಟ್ಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ರಾಜಕೀಯ ವಿಚಾರಕ್ಕೆ ಬಂದರೆ ದಕ್ಷಿಣ ಭಾರತದ ಪ್ರಜೆಗಳ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ನನಗೆ ತುಂಬಾ ಗೌರವವಿದೆ. ಆದರೆ ಸಿನಿ ನಟರ ಕುರಿತಂತೆ ಅವರಿಗಿರುವ ದೈವಿಕ ಭಾವನೆ ಹಾಗೂ ಅತಿರೇಕದ ಪ್ರೀತಿ ಮಾತ್ರ ನನಗೆ  ಅರ್ಥವಾಗುತ್ತಿಲ್ಲ. ನನಗೆ ಈಗಲೂ ನೆನಪಿದೆ. 1967-68ರಲ್ಲಿ ನಾನು ಅಣ್ಣಾಮಲೈ ವಿವಿಯ ವಿದ್ಯಾರ್ಥಿಯಾಗಿದ್ದಾಗ ನನ್ನ ಕೆಲ ತಮಿಳು ಸ್ನೇಹಿತರು ಶಿವಾಜಿ ಗಣೇಶನ್ ಅವರ ಚಿತ್ರವೊಂದಕ್ಕೆ ಕರೆದೊಯ್ದಿದ್ದರು. ಚಿತ್ರದ ಆರಂಭದಲ್ಲೇ  ಶಿವಾಜಿ ಗಣೇಶನ್ ಅವರ ಪಾದ ತೋರಿಸಲಾಗಿತ್ತು. ಇದನ್ನು ನೋಡಿದ ಜನ ಅದೇನೋ ಐತಿಹಾಸಿಕ ದೃಶ್ಯವೆಂಬಂತೆ ಖುಷಿಪಟ್ಟಿದ್ದರು. ಇದೀಗ ರಜನಿಕಾಂತ್ ಅವರನ್ನು ದೈವಿಕ ಭಾವನೆಯಲ್ಲಿ ನೋಡುತ್ತಿದ್ದಾರೆ".

"ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಜನಿಕಾಂತ್ ಅವರೇ ತಮಿಳುನಾಡು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ರಜನಿಕಾಂತ್ ಅವರು ಈ ಸ್ಥಾನ ಪಡೆಯಲು ಅರ್ಹರೇ?..ಗಂಭೀರ  ವಿಚಾರಗಳಾದ ಬಡತನ, ನಿರುದ್ಯೋಗ, ಆರೋಗ್ಯ, ರೈತರ ಸಮಸ್ಯೆ ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಬಳಿ ಉತ್ತರವಿಲ್ಲ. ಹೀಗಿದ್ದೂ ರಜನಿಕಾಂತ್ ಅವರು ರಾಜಕೀಯಕ್ಕೆ  ಬರಬೇಕು ಎಂದು ಜನ ಏಕೆ ಆಗ್ರಹಿಸುತ್ತಿದ್ದಾರೆ?.. ಅಮಿತಾಬ್ ಬಚ್ಚನ್ ಅವರಂತೆ ರಜನಿ ಕಾಂತ್ ಮೆದುಳಿನಲ್ಲೂ ಏನೂ ಇಲ್ಲ" ಎಂದು ಕಾಟ್ಜು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com