ನವದೆಹಲಿ: ಕಳೆದ ವಾರ ಪಾಕಿಸ್ತಾನದಲ್ಲಿ ಬಂಧಿತರಾದ ಮುಂಬೈ ನಿವಾಸಿ ಶೇಖ್ ನಬಿ ಅಹ್ಮದ್ ಅವರಿಗೆ ರಾಯಭಾರ ಕಚೇರಿ ಸಂಪರ್ಕದ ಸಹಾಯವನ್ನು ಭಾರತ ಬಯಸಿದೆ.
ಭಾರತೀಯ ಹೈ ಕಮಿಷನ್ ಪಾಕಿಸ್ತಾನ ವಿದೇಶಾಂಗ ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದು, ಶೇಖ್ ನಬಿ ಬಂಧನ ಕುರಿತು ವಿವರಗಳನ್ನು ಬಯಸಿದೆ. ಪಾಕಿಸ್ತಾನದಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ಇಸ್ಲಾಮಾಬಾದಿನ ಎಫ್-8 ಪ್ರದೇಶದಿಂದ ಭಾರತೀಯ ಪ್ರಜೆ ಬಂಧಿಸಲ್ಪಟ್ಟಿದ್ದರು. ಸರಿಯಾದ ಅನುಮತಿ ಪಡೆಯದೆ ಅಥವಾ ಪ್ರಯಾಣ ದಾಖಲೆಗಳಿಲ್ಲದೆ ವಾಸಿಸುತ್ತಿದ್ದಾರೆ ಎಂದು ಬಂಧಿಸಲಾಗಿತ್ತು. ವಿದೇಶಾಂಗ ಕಾಯ್ದೆಯ ಪರಿಚ್ಛೇದ 14ರಡಿ ಕೇಸು ದಾಖಲಿಸಿ ಶೇಖ್ ನಬಿ ಅಹ್ಮದ್ ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಎಫ್ಐಆರ್ ಪ್ರಕಾರ, ಮುಂಬೈ ಮೂಲದ ಅಹ್ಮದ್ ಪಾಕಿಸ್ತಾನದಲ್ಲಿ ಯಾವುದೇ ವೀಸಾ ಅಥವಾ ಎನ್ಒಸಿ ದಾಖಲೆಯಿಲ್ಲದೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ತಾನಿ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾದವ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ.