ಭಾರತದ ವೈವಿಧ್ಯತೆಯೇ ನಮ್ಮ ಬಹುದೊಡ್ಡ ಶಕ್ತಿ: ಪ್ರಧಾನಿ ಮೋದಿ

ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ಮುಸ್ಲಿಮರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ಮುಸ್ಲಿಮರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ. 

32ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ರಂಜಾನ್ ಆರಂಭದ ದಿನವಾದ ಇಂದು ದೇಶದ ಎಲ್ಲರಿಗೂ ಶುಭಾಶಯಗಳು. ದೇಶದ ಮುಸ್ಲಿಂ ಬಾಂಧವರಿದಗೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ. 

ಭಾರತ ಧಾರ್ಮಿಕ ವೈವಿಧ್ಯತೆಯುಳ್ಳ ರಾಷ್ಟ್ರವಾಗಿದ್ದು, ಭಾರತದ ವೈವಿಧ್ಯತೆಯೇ ನಮ್ಮ ಬಹುದೊಡ್ಡ ಶಕ್ತಿಯಾಗಿದೆ. ಎಲ್ಲಾ ಧರ್ಮಗಳ ಮತ್ತು ನಂಬಿಕೆಗಳ ಜನರು ಇಲ್ಲಿ ಜೊತೆಯಾಗಿ ಶಾಂತಿಯಿಂದ ಜೀವನ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. 
ಮನ್ ಕಿ ಬಾತ್ ದೇಶದ ಪ್ರತೀಯೊಬ್ಬ ಭಾರತೀಯನನ್ನೂ ನನ್ನೊಂದಿಗೆ  ವಿಶಿಷ್ಟ ಹಾದಿಯಲ್ಲಿ ಸಂಪರ್ಕಿಸುತ್ತಿದೆ. ಮನ್ ಕಿ ಬಾತ್ ಕುರಿತ ಪುಸ್ತಕಗಳನ್ನು ಎರಡು ದಿನಗಳ ಹಿಂದಷ್ಟೇ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ಕಕದಲ್ಲಿ ಯುಎಇ ಮೂಲಕ ಕಲಾವಿದರೊಬ್ಬರು ಚಿತ್ರಕಲೆಗಳನ್ನು ಬಿಡಿಸಿದ್ದಾರೆ. ಅಕ್ಬರ್ ಸಾಹೇಬ್ ಎಂದ ಕಲಾವಿದ ಚಿತ್ರಕಲೆಗಳನ್ನು ಬಿಡಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ರೀತಿಯ ಹಣವನ್ನು ಸ್ವೀಕರಿಸಿಲ್ಲ. ಈ ರೀತಿಯ ಬೆಳವಣಿಗೆ ಉತ್ತಮ ರೀತಿಯ ಪ್ರತಿಕ್ರಿಯೆಯಾಗಿದೆ ಎಂದಿದ್ದಾರೆ. 

ಜನರು ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೊಸ ವಿಚಾರಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ ಇದು ನಿಜಕ್ಕೂ ಸಂತಸವನ್ನು ತಂದಿದೆ. ನಮ್ಮಲ್ಲಿ ಎಲ್ಲರೂ ಒಟ್ಟಾಗಿ ಬಾಳುವ ಕಲೆಯಿದೆ. ಮುಂಬರುವ ಜೂನ್.5 ವಿಶ್ವ ಪರಿಸರ ದಿನ. ನಾವು ನಮ್ಮ ಪರಿಸರವನ್ನು ಚೆನ್ನಾಗಿ ನೋಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ವಿಶೇಷ ಶಕ್ತಿಯಿದೆ. ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿತ್ತು. ವೇದಗಳಲ್ಲಿ ಭೂಮಿ ಪರಿಸರ ಜೀವನ ಕೇಂದ್ರವೆಂದು ಹೇಳಲಾಗಿದೆ. ನಮ್ಮ ಪೂರ್ವಿಕರು ಪ್ರಕೃತಿಯನ್ನು ರಕ್ಷಿಸಿದ್ದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಪರಿಸರ ರಕ್ಷಿಸುವುದನ್ನು ನಾವು ಮುಂದುವರೆಸಿದರೆ ಮುಂದಿನ ತಲೆಮಾರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದರು. 

ನಂತರ ಯೋಗ ದಿನಾಚರಣೆ ಕುರಿತಂತೆ ಮಾತನಾಡಿದ ಅವರು, ಜೂನ್. 21 ವಿಶ್ವ ಯೋಗ ದಿನವಾಗಿದ್ದು, ಭಾರತ ವಿಶ್ವಕ್ಕೆ ನೀಡಿದ ಮಹತ್ವದ ಕೊಡುಗೆಯೇ ಯೋಗ. ಯೋಗದ ಮೂಲಕ ಒತ್ತಡ ರಹಿತ ಜೀವನ ಸಾಧ್ಯ ಅತ್ಯಂತ ಅಲ್ಪ ಅವಧಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ವಿಶ್ವದಾದ್ಯಂತ ಪಸರಿಸಿದೆ ಎಂದು ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com