ಮುಂಬೈ: ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಉದ್ಧವ್ ಠಾಕ್ರೆ ಅವರು ತಮ್ಮ ಪುತ್ರ ಆದಿತ್ಯ ಠಾಕ್ರೆ ಅವರೊಂದಿಗೆ ಇಂದು ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ಹೋಟೆಲ್ ವೊಂದರಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಹಾಗೂ ಶಿವಸೇನೆ ನೋಟ್ ನಿಷೇಧ ಹಾಗೂ ಜಿಎಸ್ ಟಿ ಸೇರಿದಂತೆ ಹಲವು ವಿಷಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಲವು ಬಾರಿ ಕಟುವಾಗಿ ಟೀಕಿಸಿವೆ.
ಜನವರಿಯಲ್ಲಿ ಕೋಲ್ಕತಾದಲ್ಲಿ ನಡೆಯಲಿರುವ ಬಂಗಾಳ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಮುಂಬೈ ಆಗಮಿಸಿದ್ದು, ನಿನ್ನೆ ಹಲವು ಉದ್ಯಮಿಗಳು ಮತ್ತು ಬ್ಯಾಂಕರ್ ಗಳೊಂದಿಗೆ ಸಭೆ ನಡೆಸಿದ್ದು, ನಾಳೆ ಕೋಲ್ಕತಾಗೆ ವಾಪಸ್ ಆಗಲಿದ್ದಾರೆ.