ಸಾಂದರ್ಭಿಕ ಚಿತ್ರ
ದೇಶ
ಪ್ಯಾರಡೈಸ್ ಪೇಪರ್ಸ್ ಬಹಿರಂಗ: ಪಟ್ಟಿಯಲ್ಲಿ ಕೇಂದ್ರ ಸಚಿವರು ಸೇರಿ 700ಕ್ಕೂ ಅಧಿಕ ಭಾರತೀಯರ ಹೆಸರು!
ಪನಾಮಾ ಪೇಪರ್ ಹಗರಣದ ಬೆನ್ನಲ್ಲೇ ಮತ್ತೊಂದು ಬೃಹತ್ ರಹಸ್ಯ ವಿದೇಶಿ ಸಂಪತ್ತು ಹೊಂದಿರುವವರ ಪಟ್ಟಿ ಭಾನುವಾರ ರಾತ್ರಿ ಬಿಡುಗಡೆಯಾಗಿದ್ದು,...
ನವದೆಹಲಿ: ಪನಾಮಾ ಪೇಪರ್ ಹಗರಣದ ಬೆನ್ನಲ್ಲೇ ಮತ್ತೊಂದು ಬೃಹತ್ ರಹಸ್ಯ ವಿದೇಶಿ ಸಂಪತ್ತು ಹೊಂದಿರುವವರ ಪಟ್ಟಿ 'ಪ್ಯಾರಡೈಸ್ ಪೇಪರ್ಸ್' ಭಾನುವಾರ ರಾತ್ರಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಕೇಂದ್ರ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ ಪಟ್ಟಿಯಲ್ಲಿ ಸುಮಾರು 715ಕ್ಕೂ ಅಧಿಕ ಮಂದಿ ಭಾರತೀಯ ಹೆಸರು ಇದೆ ಎಂದು ಹೇಳಲಾಗುತ್ತಿದೆ.
ಖ್ಯಾತ ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಅಮೆರಿಕ ಮೂಲದ ಇಂಟರ್ ನ್ಯಾಷನಲ್ ಕನ್ಸಾರ್ಟಿಯಂ ಆಫ್ ಜರ್ನಲಿಸ್ಟ್ಸ್ ತಂಡ, "ಪ್ಯಾರಡೈಸ್ ಪೇಪರ್ಸ್" ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ ಹಲವು ದಾಖಲೆಗಳು ವಿಶ್ವದ ಹೆಸರಾಂತ ಕಂಪೆನಿಗಳ ಅವ್ಯವಹಾರವನ್ನು ಬಯಲಿಗೆಳೆದಿವೆ. ವಾಣಿಜ್ಯ ಕಂಪನಿಗಳು ಮಾತ್ರವಲ್ಲದೇ ರಾಜಕೀಯ, ಕಿರುತೆರೆ, ಬೆಳ್ಳೆತೆರೆ ಮನರಂಜನಾ ಕ್ಷೇತ್ರದ ಹಲವು ಖ್ಯಾತನಾಮರ ಹೆಸರುಗಳು ಕೂಡ ಈ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗಿದೆ.
ಇನ್ನು ಈ ಪಟ್ಟಿಯಲ್ಲಿ ಮೋದಿ ಸರ್ಕಾರದ ಇಬ್ಬರು ಪ್ರಭಾವಿ ಸಚಿವರು ಹಾಗೂ ದೇಶದ ಪ್ರಭಾವಿ ರಾಜಕಾರಣಿಗಳು, ಪ್ರಸಿದ್ಧ ಕಾರ್ಪೋರೇಟ್ ಕಂಪೆನಿಗಳ ಜೊತೆಗೆ ಆ್ಯಪಲ್, ನೈಕಿ, ಉಬರ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದ ಹೆಸರಾಂತ ಕಂಪೆನಿಗಳು ತೆರಿಗೆ ಹಣ ಉಳಿಸಲು ಮಾಡಿದ ಅವ್ಯವಹಾರಗಳು ಈ ಪ್ಯಾರಡೈಸ್ ಪೇಪರ್ಸ್ ನಲ್ಲಿ ದಾಖಲಾಗಿವೆ. ಪ್ರಮುಖವಾಗಿ ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿಯ ಹೆಸರೂ ಈ ಹಗರಣದಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.
13.4 ಮಿಲಿಯನ್ ದಾಖಲೆಗಳನ್ನು ಒಳಗೊಂಡಿರುವ ಪ್ಯಾರಡೈಸ್ ಪೇಪರ್ಸ್ ಪಟ್ಟಿಯಲ್ಲಿ 714 ಭಾರತೀಯಕ ಹೆಸನ್ನೊಳಗೊಂಡಿದ್ದು, ಇದಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ವಾಣಿಜ್ಯ ಕಾರ್ಯದರ್ಶಿಯೊಬ್ಬರ ಕೋಟ್ಯಂತರ ಅವ್ಯವಹಾರ, ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಅವರ ಪ್ರಮುಖ ದೇಣಿಗೆಗಾರರಲ್ಲೊಬ್ಬರ ರಹಸ್ಯ ವ್ಯವಹಾರಗಳು, ರಷ್ಯಾ ಅಧ್ಯಕ್ಷರ ಆಪ್ತರ ಕುರಿತ ದಾಖಲೆಗಳು, ಇಂಗ್ಲೆಂಡಿನ ರಾಣಿಗೆ ಸಂಬಂಧಿಸಿದ ರಹಸ್ಯ ಹಣಕಾಸು ವ್ಯವಹಾರಗಳು ಸೇರಿದಂತೆ ವಿಶ್ವದ 120 ಪ್ರಭಾವಿ ರಾಜಕಾರಣಿಗಳ ಹಗರಣಗಳು ಪ್ಯಾರಡೈಸ್ ಪೇಪರ್ಸ್ ನಲ್ಲಿ ಅಡಗಿವೆ ಎಂದು ಹೇಳಲಾಗುತ್ತಿದೆ.
ಈ ಪ್ಯಾರಡೈಸ್ ಪೇಪರ್ಸ್ ಹಗರಣ ಈ ಹಿಂದೆ ಬಯಲಾಗಿದ್ದ ಪನಾಮಾ ಪೇಪರ್ಸ್ ಹಗರಣಕ್ಕಿಂತಲೂ ದೊಡ್ಡದಾಗಿದೆ ಎಂದೂ ಹೇಳಲಾಗುತ್ತಿದೆ.
ದೇಶದ ಪ್ರಭಾವಿ ರಾಜಕಾರಣಿಗಳು, ವಾಣಿಜ್ಯೋಧ್ಯಮಿಗಳು, ತಾರೆಗಳು ದೇಶದ ಬೊಕ್ಕಸಕ್ಕೆ ನೀಡಬೇಕಿದ್ದ ತೆರಿಗೆ ಹಣವನ್ನು ವಂಚಿಸಿ ತೆರಿಗೆಸ್ವರ್ಗವಾಗಿರುವ ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಪ್ಯಾರಡೈಸ್ ಪೇಪರ್ ನಲ್ಲಿ ಆರೋಪಿಸಲಾಗಿದೆ.

