ನವದೆಹಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದ ಆರೋಪಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಷರತ್ತುಬದ್ಧ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬಹುದೇ ಎಂಬುದುರ ಕುರಿತು ನಿಮ್ಮ ನಿಲುವು ತಿಳಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
ವಿದೇಶಕ್ಕೆ ಅನುಮತಿ ಕೋರಿ ಕಾರ್ತಿ ಚಿದಂಬರಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಈ ಕುರಿತು ನವೆಂಬರ್ 16ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಐಎನ್ಎಕ್ಸ್ ಮಾಧ್ಯಮ ಸಂಸ್ಥೆಗೆ ವಿದೇಶಿ ಹೂಡಿಕೆ ಪಡೆದುಕೊಳ್ಳಲು ಕಾನೂನುಬಾಹಿರವಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಿಂದ (ಎಫ್ ಐಪಿಬಿ) ಅನುಮೋದನೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಕಳೆದ ಮೇ 15ರಂದು ಎಫ್ ಐಆರ್ ದಾಖಲಿಸಿದೆ.