ಪಿಒಕೆ ಬಿಡಿ.. ಮೊದಲು ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ: ಕೇಂದ್ರಕ್ಕೆ ಫಾರೂಕ್ ಅಬ್ದುಲ್ಲಾ

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲ..ಮೊದಲು ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕಾಶ್ಮೀರ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲ..ಮೊದಲು  ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಿಲ್ಲ ಎಂಬ ತಮ್ಮ ಪುತ್ರ ಒಮರ್ ಅಬ್ದುಲ್ಲಾ ಹೇಳಿಕೆಗೆ ಸಮರ್ಥನೆ ನೀಡಿರುವ ಫಾರೂಕ್ ಅಬ್ದುಲ್ಲಾ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತ್ರಿವರ್ಣ  ಧ್ವಜವನ್ನು ಹಾರಿಸುವ ಹುಮ್ಮಸ್ಸಿನ ಮಾತುಗಳನ್ನಾಡುತ್ತಿವೆ. ಆದರೆ ಅವರಿಗೆ ಪ್ರಾದೇಶಿಕ ನೈಜತೆ ತಿಳಿದಿಲ್ಲ.. ಪಿಒಕೆ ಮಾತು ಪಕ್ಕಕ್ಕಿಡಿ.. ಮೊದಲು ರಾಜಧಾನಿ ಶ್ರೀನಗರದ ಹೃದಯಭಾಗದಲ್ಲಿರುವ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ  ಹಾರಿಸಿ..ಲಾಲ್ ಚೌಕ್ ನಲ್ಲೇ ಅವರು ಧ್ವಜ ಹಾರಿಸಲಾಗದಿದ್ದಾಗ.. ಪಾಕ್ ಆಕ್ರಮಿತ ಕಾಶ್ಮೀರದ ಮಾತು ಎಲ್ಲಿಂದ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
"ಅವರು (ಕೇಂದ್ರ ಸರಕಾರ) ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಧ್ವಜ ಹಾರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಶ್ರೀನಗರದ ಲಾಲ್‌ ಚೌಕ್‌ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುವಂತೆ ನಾನವರಿಗೆ ಸವಾಲೆಸೆಯುತ್ತೇನೆ. ಆ ಕೆಲಸ  ಮಾಡಲು ಇಲ್ಲೇ ಅವರಿಗೆ ಸಾಧ್ಯವಾಗುತ್ತಿಲ್ಲ... ಇನ್ನು ಪಿಒಕೆ ಬಗ್ಗೆ ಬೇರೆ ಮಾತನಾಡುತ್ತಿದ್ದಾರೆ" ಎಂದು ಅವರು ಲೇವಡಿ ಮಾಡಿದ್ದಾರೆ.
ಫಾರೂಕ್‌ ಅವರ ಹೇಳಿಕೆ ಇದೀಗ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದು, ನ್ಯಾಷನಲ್‌ ಕಾನ್ಪರೆನ್ಸ್‌ ಮುಖಂಡ ಫಾರೂಕ್‌ ಅವರು ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿಗಳ ಬಲ ಹೆಚ್ಚಿಸುತ್ತಿದ್ದಾರೆ ಎಂದು ಜಮ್ಮು ಮತ್ತು  ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್‌ ಸಿಂಗ್‌ ಆರೋಪಿಸಿದ್ದಾರೆ. ಲಾಲ್‌ ಚೌಕ್‌ ಅಷ್ಟೇ ಅಲ್ಲ, ರಾಜ್ಯದ ಮೂಲೆಮೂಲೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ,'' ಎಂದು ಅವರು ತಿರುಗೇಟು ನೀಡಿದ್ದಾರೆ.
ಇನ್ನು ಈ ಹಿಂದೆ ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿಲ್ಲ ಎಂದು ಹೇಳುವ ಮೂಲಕ ಫಾರೂಕ್ ಅಬ್ದುಲ್ಲಾ ವಿವಾದ ಕಿಡಿ ಹೊತ್ತಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com