ಉತ್ತರಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಧಾರ್ಮಿಕ ಪ್ರವಾಸೋದ್ಯಮ ಯೋಜನೆಯನ್ವಯ ಹಾಗೂ ಅಯೋಧ್ಯೆಯನ್ನು ಜಗತ್ತಿನ ಮುಂದಿಡುವ ಅಂಗವಾಗಿ ಅಯೋಧ್ಯೆಯ ಸರಯೂ ನದಿಯ ತಡದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಯೋಜನೆ ಕುರಿತ ಪ್ರಸ್ತಾವನೆಯನ್ನು ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.
ಉತ್ತರಪ್ರದೇಶದ ರಾಜ್ಯ ಪ್ರವಾಸೋದ್ಯಮ ಸಚಿವಾಲಯ ಇತ್ತೀಚೆಗಷ್ಟೇ ಪ್ರವಾಸೋದ್ಯಮ ಕೈಪಿಡಿಯಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್'ನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯನ್ನು ಸ್ಫಾಪಿಸುವ ಸರ್ಕಾರದ ನಿರ್ಧಾರ ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದ್ದು, ತಾಜ್ ಮಹಲ್ ವಿವಾದ ಕುರಿತಂತೆ ಈಗಾಗಲೇ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ವಿರೋಧ ಪಕ್ಷಗಳಿಗೆ ಮತ್ತಷ್ಟು ಆಹಾರವನ್ನು ಒದಗಿಸಿದಂತಾಗಿದೆ.
ವಿಶ್ವ ವಿಖ್ಯಾತ ತಾಜ್ ಮಹಲ್ ನ್ನು ಉತ್ತರ ಪ್ರದೇಶ ಸರ್ಕಾರ ಕಡೆಗಣಿಸಿರುವುದಕ್ಕೆ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು 'ಅಂಧೇರ್ ನಗರೀ ಚೌಪಟ್ ರಾಜಾ' ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಈಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿಗೆ ಚಾಲನೆ ನೀಡಿದ್ದಾರೆ.