ತಮಿಳುನಾಡು: ಸರ್ಕಾರಿ ಬಸ್ ಡಿಪೋ ಛಾವಣಿ ಕುಸಿದು 8 ಸಾವು, 4 ಜನರಿಗೆ ಗಾಯ

ತಮಿಳುನಾಡು ಸಾರಿಗೆ ಸಂಸ್ಥೆಯ ಡಿಪೋದ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಸ್ಥಳದಲ್ಲಿಯೇ 8 ಮಂದಿ ದುರ್ಮರಣವನ್ನಪ್ಪಿ, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಪಟ್ಟಣಂ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ...
ಸರ್ಕಾರ ಬಸ್ ಡಿಪೋ ಛಾವಣಿ ಕುಸಿದು 8 ಸಾವು
ಸರ್ಕಾರ ಬಸ್ ಡಿಪೋ ಛಾವಣಿ ಕುಸಿದು 8 ಸಾವು

ನಾಗಪಟ್ಟಣಂ: ತಮಿಳುನಾಡು ಸಾರಿಗೆ ಸಂಸ್ಥೆಯ ಡಿಪೋದ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಸ್ಥಳದಲ್ಲಿಯೇ 8 ಮಂದಿ ದುರ್ಮರಣವನ್ನಪ್ಪಿ, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಪಟ್ಟಣಂ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. 

ನಾಗಪಟ್ಟಣಂ ಜಿಲ್ಲೆಯ ಪರಯೂರು ಬಳಿಯಿರುವ ಬಸ್ ಡಿಪೋದಲ್ಲಿ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. 

ದುರ್ಘಟನೆ ನಡೆಸ ಸಂದರ್ಭದಲ್ಲಿ ಚಾಲಕರು ಹಾಗೂ ಡಿಪೋ ಸಿಬ್ಬಂದಿಗಳು ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಡಿಪೋದ ಮೇಲ್ಚಾವಣಿ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ನಾಲ್ಕು ಮಂದಿ ಬಸ್ ಚಾಲಕರು ಹಾಗೂ ನಾಲ್ಕು ಮಂದಿ ಡಿಪೋ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. 

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸಾರಿಗೆ ಸಚಿವ ಎಂ.ಆರ್. ವಿಜಯಭಾಸ್ಕರ್ ಅವರು, ಅತೀವ ಚಳಿಯಿದ್ದ ಕಾರಣ ಕಟ್ಟಡ ಕುಸಿದು ಬಿದ್ದಿದೆ. ಸಂತ್ರಸ್ತ ಕುಟುಂಬಸ್ಥರಿಗೆ ಪರಿಹಾರ ಧನವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 
ಮೃತರನ್ನು ಪ್ರಭಾಕರನ್, ಬಾಲು, ಚಂದ್ರಶೇಖರನ್, ಧನಪಾಲ್, ಮುನಿಸ್ವಾಮಿ, ರಾಮಲಿಂಗಮ್, ಅಂಬರಸನ್ ಮತ್ತು ಮನಿವನ್ನನ್ ಎಂದು ಗುರ್ತಿಸಲಾಗಿದೆ. ಗಾಯಾಳುಗಳನ್ನು ವೆಂಕಟೇಶನ್, ಸಂಥಿಲ್ ಮತ್ತು ಪ್ರೇಮ್ ಕುಮಾರ್ ಹೇಳಲಾಗುತ್ತಿದೆ. 

ಘಟನೆ ಬಳಿಕ ಜಿಲ್ಲಾಧಿಕಾರಿ ಎಸ್. ಸುರೇಶ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಆಕ್ರೋಶಭರಿತ ಕೆಲಸಗಾರರು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಸ್ಥಳೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆಂದು ತಿಳಿದುಬಂದಿದೆ. 

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು, ಘಟನೆ ದುರಾದೃಷ್ಟಕರ. ಮೃತರ ಕುಟುಂಬಸ್ಥರಿಗೆ ಸರ್ಕಾರ ರೂ. 7.5 ಲಕ್ಷ ಪರಿಹಾರವನ್ನು ನೀಡಲಿದೆ. ಅಲ್ಲದೆ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ರೂ.1.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ರೂ.50 ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com