ರೊಹಿಂಗ್ಯಾ ಮುಸ್ಲಿಮರನ್ನೇಕೆ ಪ್ರಧಾನಿ ಮೋದಿ ತಮ್ಮ ಸಹೋದರರೆಂದು ಒಪ್ಪಿಕೊಳ್ಳುತ್ತಿಲ್ಲ: ಓವೈಸಿ ಪ್ರಶ್ನೆ

ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಿ ಮೋದಿಯವರ ವಿರುದ್ಧ ಎಐಎಂಐಎಂ ಅಧ್ಯಕ್ಷ ಹಾಗೂ...
ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ
ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ

ಹೈದರಾಬಾದ್: ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಿ ಮೋದಿಯವರ ವಿರುದ್ಧ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. 

ರೊಹಿಂಗ್ಯಾ ವಲಸಿಗರ ಗಡಿಪಾರು ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇತರೆ ನಿರಾಶ್ರಿತರಿಗೆ ಭಾರತದಲ್ಲಿರಲು ಅವಕಾಶವಿರುವುದಾದರೆ, ರೊಹಿಂಗ್ಯಾ ಮುಸ್ಲಿಮರಿಗೇಕಿಲ್ಲ. ಇತರೆ ವಲಸಿಗರಿಗೆ ನೀಡಿರುವ ಅವಕಾಶದಂತೆಯೇ ರೊಹಿಂಗ್ಯಾ ಮುಸ್ಲಿಮರಿಗು ಭಾರತದಲ್ಲಿ ನೆಲೆಸಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ. 

ಇದೇ ವೇಳೆ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನು ಹೆಸರಿಸಿ ಮಾತನಾಡಿರುವ ಅವರು, ತಸ್ಲೀಮಾ ನಸ್ರೀನ್ ಅವರು 1994ರಿಂದಲೂ ಭಾರತದಲ್ಲಿ ನೆಲೆಯೂರಿದ್ದಾರೆ. ತಸ್ಲೀಮಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಹೋದರಿಯಾಗುವುದಾದರೆ, ರೊಹಿಂಗ್ಯಾ ಮುಸ್ಲಿಮರನ್ನೇಕೆ ಪ್ರಧಾನಿ ಮೋದಿಯವರು ತಮ್ಮ ಸಹೋದರರೆಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಎಲ್ಲವನ್ನೂ ಕಳೆದುಕೊಂಡಿರುವ ಜನರನ್ನು ಗಡಿಪಾರು ಮಾಡುವುದು ಮಾನವೀಯತೆಯೇ? ಇದು ತಪ್ಪು. ಭಾರತದಲ್ಲಿರುವ ಎಲ್ಲಾ ರೊಹಿಂಗ್ಯಾ ಮುಸ್ಲಿಮರನ್ನೂ ಅವರ ದೇಶಕ್ಕೆ ಯಾವ ಕಾನೂನಿನ ಆಧಾರದ ಮೇಲೆ ಕೇಂದ್ರ ಕಳುಹಿಸಿತ್ತದೆ? ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ಭಾರತ ಸರ್ಕಾರ ಯತ್ನ ನಡೆಸುತ್ತಿದೆ. ಇದು ಭಾರತದ ಶಕ್ತಿಯೇ? ಮಾನವ ಹಕ್ಕುಗಳ ಮಂಡಳಿಯಿಂದ ಅನುಮತಿ ಪಡೆದುಕೊಂಡಿರುವ ಮುಸ್ಲಿಮರನ್ನು ಕೇಂದ್ರ ಹಿಂದಕ್ಕೆ ಕಳುಹಿಸುತ್ತದೆಯೇ? ಎಂದು ಹೇಳಿದ್ದಾರೆ.
 
ಇದೇ ವೇಳೆ ತಮಿಳುನಾಡು ರಾಜ್ಯದಲ್ಲಿ ನೆಲೆಸಿರುವ ಶ್ರೀಲಂಕಾ ವಲಸಿಗರ ಕುರಿತತೆ ಮಾತನಾಡಿರುವ ಅವರು, ಭಯೋತ್ಪಾದನೆಗಳಲ್ಲಿ ಭಾಗಿಯಾಗುತ್ತಿದ್ದರೂ, ಶ್ರೀಲಂಕಾ ವಲಸಿಗರನ್ನು ಭಾರತದಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಬಾಂಗ್ಲಾದೇಶದ ಚಕ್ಮಾ ಜನತೆ 1971ರಲ್ಲಿ ಭಾರತಕ್ಕೆ ಬಂದಿದ್ದರು. ಅರುಣಾಚಲ ಪ್ರದೇಶದಲ್ಲಿ ಇಂದಿಗೂ ಅವರನ್ನು ನಾವು ಕಾಣಬಹುದು. 

ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ರೊಹಿಂಗ್ಯಾರನ್ನು ಮುಸ್ಲಿಮರೆಂದು ನೋಡಬಾರದು, ವಲಸಿಗರೆಂದು ಪರಿಗಣಿಸಬೇಕು. ರೊಹಿಂಗ್ಯಾ ವಲಸಿಗರಿಗೆ ಭಾರತ ಸರ್ಕಾರ ಆಶ್ರಯ ನೀಡಿ, ಸಾಮಾನ್ಯರಂತೆ ಅವರೂ ಕೂಡ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಆಶಿಸುತ್ತೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com