ಕೋಮುಶಕ್ತಿಗಳು ಭಾರತದ ಗೌರವವನ್ನು ಜಾಗತಿಕವಾಗಿ ಹಾಳು ಮಾಡುತ್ತಿವೆ: ರಾಹುಲ್ ಗಾಂಧಿ

ಜಾಗತಿಕ ಮಟ್ಟದಲ್ಲಿ ಭಾರತ ಶಾಂತಿಯುತ ಹಾಗೂ ಸೌಹಾರ್ದಯುತ ದೇಶವೆಂದು ಖ್ಯಾತಿ ಪಡೆದುಕೊಂಡಿದ್ದು, ಭಾರತದ ಈ ಗೌರವನ್ನು ಕೋಮುಶಕ್ತಿಗಳು ಹಾಳು ಮಾಡುತ್ತಿವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ಭಾರತ ಶಾಂತಿಯುತ ಹಾಗೂ ಸೌಹಾರ್ದಯುತ ದೇಶವೆಂದು ಖ್ಯಾತಿ ಪಡೆದುಕೊಂಡಿದ್ದು, ಭಾರತದ ಈ ಗೌರವನ್ನು ಕೋಮುಶಕ್ತಿಗಳು ಹಾಳು ಮಾಡುತ್ತಿವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ. 
ಎರಡು ವಾರಗಳ ಕಾಲ ಅಮೆರಿಕಾ ರಾಷ್ಟ್ರದಲ್ಲಿ ಸುಧೀರ್ಘ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿಯವರು ಐಕಾನಿಕ್ ಟೈಮ್ಸ್ ಸ್ಕ್ವೇರ್ ಬಳಿಯಿರುವ ಹೋಟೆಲ್ ಬಾಲ್ ನಲ್ಲಿ 2,000 ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದು, ನೂರಾರು ವರ್ಷಗಳ ಕಾಲ ಶಾಂತಿ ಹಾಗೂ ಸೌಹಾರ್ದಯುತವಾಗಿ ಹೇಗೆ ಬಾಳಬೇಕೆಂಬುದನ್ನು ಜಗತ್ತಿಗೆ ಭಾರತ ತೋರಿಸಿಕೊಟ್ಟಿದೆ. ಆದರೆ, ದೇಶದಲ್ಲಿರುವ ಕೆಲ ಕೋಮುಶಕ್ತಿಗಳನ್ನು ದೇಶವನ್ನು ಒಡೆಯುತ್ತಿದ್ದು, ಭಾರತದ ಗೌರವ ಜಾಗತಿಕ ಮಟ್ಟದಲ್ಲಿ ಹಾಳಾಗುವಂತೆ ಮಾಡುತ್ತಿವೆ ಎಂದು ಹೇಳಿದ್ದಾರೆ. 
ವಿಶ್ವಮಟ್ಟದಲ್ಲಿ ಭಾರತದ ಗೌರವ ಅತ್ಯಂತ ಮುಖ್ಯವಾದದ್ದು. ವಿಶ್ವ ಬದಲಾಗುತ್ತಿದ್ದು, ಜನರು ಇಂದು ಭಾರತದತ್ತ ಮುಖ ಮಾಡಿ ನೋಡುತ್ತಿದ್ದಾರೆ. ವಿಶ್ವದಲ್ಲಿರುವ ಹಲವು ಹಿಂಸಾತ್ಮಕ ರಾಷ್ಟ್ರಗಳು ಇಂದು ಭಾರತದತ್ತ ನೋಡುತ್ತಿದ್ದು, 21ನೇ ಶತಮಾನಕ್ಕೆ ಭಾರತ ಉತ್ತರವಾಗಬಹುದು ಎಂದು ಹೇಳುತ್ತಿವೆ. ದೇಶದಲ್ಲಿರುವ ಇಂತಹ ಪ್ರಬಲ ಆಸ್ತಿಯನ್ನು ನಾವು ಕಳೆದುಕೊಳ್ಳಬಾರದು. ಭಾರತದಲ್ಲಿರುವ 1.3 ಬಿಲಿಯನ್ ರಷ್ಟು ಜನರು ಸಂತೋಷವಾಗಿ, ಅಹಿಂಸಾತ್ಮಕವಾಗಿ ಹಾಗೂ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಇಡೀ ವಿಶ್ವವೇ ನಮ್ಮನ್ನು ಗೌರವಿಸುತ್ತಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಅಮೆರಿಕ ಪ್ರವಾಸ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, ಅಮೆರಿಕಾಗೆ ಭೇಟಿ ನೀಡಿದಾಗಿನಿಂದಲೂ ಸಾಕಷ್ಟು ಜನರನ್ನು ನಾನು ಭೇಟಿ ಮಾಡಿದೆ. ಭೇಟಿಯಾದ ಹಲವು ಮಂದಿ ಭಾರತದ ಸಹಿಷ್ಣುತೆ ಕುರಿತಂತೆ ಪ್ರಶ್ನೆ ಕೇಳುತ್ತಿದ್ದರು. ಇದು ನನಗೆ ಸಾಕಷ್ಟು ಆಶ್ಚರ್ಯವನ್ನು ತಂದಿತು. ಪ್ರತೀಯೊಂದನ್ನೂ ನಾವು ಭಾರತದಲ್ಲಿ ಚರ್ಚೆ ನಡೆಸುತ್ತೇವೆ. ಭಾರತದಲ್ಲಿ ಕೆಲ ಕೋಮು ಶಕ್ತಿಗಳಿವೆ. ಭಾರತದಲ್ಲಿ ಪ್ರತೀನಿತ್ಯ 30,000 ಯುವಕರು ಹುಟ್ಟಿಕೊಳ್ಳುತ್ತಿದ್ದಾರೆ. ಇದರಲ್ಲಿ 450 ಜನರು ಮಾತ್ರ ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಪ್ರಕ್ರಿಯೆಗಳು ಹೀಗೆಯೇ ಮುಂದುವರೆದರೆ, ಮುಂದಿನ ಫಲಿತಾಂಶ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಬಹುದು ಎಂದಿದ್ದಾರೆ. 

ಕಾಂಗ್ರೆಸ್ ನ ನಿಜವಾದ ಹೋರಾಟವಿರುವುದು ಅನಿವಾಸಿ ಭಾರತೀಯರ ಕುರಿತಂತಾಗಿದೆ. ಅನಿವಾಸಿ ಭಾರತೀಯರು ಹೊಸ ಹೊಸ ಆಲೋಚನೆಯೊಂದಿಗೆ ಮುಂದಕ್ಕೆ ಬರಬೇಕಿದೆ. ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯಬೇಕಿದೆ. ಮಹಾತ್ಮ ಗಾಂಧಿ ಕೂಡ ಅನಿವಾಸಿ ಭಾರತೀಯರಾಗಿದ್ದರು. ಜವಾಹರ್ ಲಾಲ್ ನೆಹರೂ ಕೂಡ ಇಂಗ್ಲೆಂಡ್ ನಿಂದ ಬಂದಿದ್ದರು. ಅಂಬೇಡ್ಕರ್, ಪಟೇಲ್, ಮೌಲಾನಾ ಆಜಾದ್ ಪ್ರತೀಯೊಬ್ಬರು ವಿಶ್ವದ ಇತರೆಡೆಯಿಂದ ಭಾರತಕ್ಕೆ ಬಂದವರೇ ಆಗಿದ್ದರು. ಹೊಸ ಹೊಸ ಆಲೋಚನೆಗಳೊಂದಿಗೆ ಭಾರತಕ್ಕೆ ಬಂದು ಭಾರತವನ್ನು ಬದಲಾಯಿಸಿದ್ದರು ಎಂದು ಹೇಳಿದ್ದಾರೆ. 

ಇದೇ ವೇಳೆ ಅನಿವಾಸಿ ಭಾರತೀಯರನ್ನು ಕೊಂಡಾಡಿರುವಅವರು, ಇಂದು ನಾನು ಭಾರತಕ್ಕೆ ಹೇಗೆಯೇ ಮರಳಿದರೂ, ಭಾರತೀಯನೆಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುವಂತೆ ಮಾಡಿದ್ದೀರಿ. ದೇಶದ ಪ್ರಗತಿಗೆ ಭಾರತೀಯ ಸಮುದಾಯಗಳ ಕೊಡುಗೆ ಆಗಾಧವಾದುದು. ಅನಿವಾಸಿ ಭಾರತೀಯರು ನಮ್ಮ ದೇಶದ ಬೆನ್ನುಲುಬು ಇದ್ದಂತೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com