ಕದನ ವಿರಾಮ ಉಲ್ಲಂಘಿಸಿದ ಪಾಕ್: ಸೇನೆಯನ್ನು ಗುರಿಯಾಗಿರಿಸಿ ಅಪ್ರಚೋದಿತ ಗುಂಡಿನ ದಾಳಿ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಬುಧವಾರ...
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಬುಧವಾರ ತಿಳಿದುಬಂದಿದೆ.
ಪೂಂಚ್ ಹಾಗೂ ಭೀಮ್ಬರ್ ಗಾಲಿ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಸಣ್ಣ ಹಾಗೂ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುತ್ತಿದ್ದು. ಪಾಕಿಸ್ತಾನ ಸೇನಾ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ರಕ್ಷಣಾ ವಕ್ತಾರ ಹೇಳಿದ್ದಾರೆ.
ಸೆಪ್ಟೆಂಬರ್ 24 ರಂದು ಪಾಕಿಸ್ತಾನ ಸೇನೆ ಬಾಲ್ಕೊಟೆ ಸೆಕ್ಟರ್ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಈ ವೇಳೆ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಯೋಧರು ಗಾಯಗೊಂಡಿದ್ದರು.
ಸೆಪ್ಟಂಬರ್ 23 ರಂದೂ ಕೂಡ ಅರ್ನಿಯಾ, ಆರ್.ಎಸ್.ಪುರ ಮತ್ತು ರಾಮ್ಗಢ್ ಮತ್ತು ಪೂಂಚ್ ಸೆಕ್ಟರ್ ಬಳಿಯಿರುವ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ 7 ಜನರಿಗೆ ಗಾಯಗಳಾಗಿತ್ತು.