ನವದೆಹಲಿ: ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ಸಂಸತ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದರು.
ಎನ್ ಸಿಪಿ ನಾಯಕ ಶರದ್ ಪವಾರ್, ನಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಖ್ ಅಬ್ದುಲ್ಲಾ, ಟಿಎಂಸಿ ಸೌಗತ್ ರಾಯ್, ಎನ್ ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸ್ ನ ಜ್ಯೋತಿರಾದಿತ್ಯ ಸಿಂಧೆ, ಟಿಆರ್ ಎಲ್ ನ ಜೀತೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್ ಎಂ. ವೀರಪ್ಪ ಮೊಯ್ಲಿ ಅವರನ್ನು ಆಂಧ್ರ ಸಿಎಂ ಭೇಟಿ ಮಾಡಿದ್ದಾರೆ.
ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡಿದ ಚಂದ್ರಬಾಬು ನಾಯ್ಡು ಅವರು, ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಚಂದ್ರಬಾಬು ನಾಯ್ಡು ಅವರು ಇದಕ್ಕು ಮುನ್ನ ಸಂಸತ್ ಭವನದ ಬಳಿರುವ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿದ್ದರು.
ಈ ಮಧ್ಯೆ, ವಿಶೇಷ ಸ್ಥಾನಮಾನಕ್ಕಾಗಿ ಸಂಸತ್ ಹೊರಗೆ ಟಿಡಿಪಿ ಸಂಸದರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.