ಗದ್ದಲಕ್ಕೆ ಸಂಸತ್ ಕಲಾಪ ಬಲಿ: ಪ್ರತಿಭಟನೆ ನಡೆಸಲು ಬಿಜೆಪಿ, ಕಾಂಗ್ರೆಸ್ ನಿರ್ಧಾರ

ಪ್ರತಿಪಕ್ಷಗಳ ಗದ್ದಲದಿಂದಾಗಿಯೇ ಸುದ್ದಿಗೆ ಗ್ರಾಸವಾಗಿದ್ದ ಸಂಸತ್ ಬಜೆಟ್ ಅಧಿವೇಶನ ಯಾವುದೇ ರೀತಿಯ ಫಲಪ್ರದ ಚರ್ಚೆ ಇಲ್ಲದೇ ಅಂತ್ಯವಾಗಿದ್ದು, ಹೆಚ್ಚು ಕಡಿಮೆ ಸಂಪೂರ್ಣವಾಗಿ ವ್ಯರ್ಥವಾಗಿದೆ. ಕಲಾಪ ವ್ಯರ್ಥಕ್ಕೆ ವಿರೋಧ ಪಕ್ಷಗಳೇ ಕಾರಣ ಎಂದು ಒಂದೆಡೆ ಬಿಜೆಪಿ ಆರೋಪಿ ಮಾಡುತ್ತಿದ್ದರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ; ಪ್ರತಿಪಕ್ಷಗಳ ಗದ್ದಲದಿಂದಾಗಿಯೇ ಸುದ್ದಿಗೆ ಗ್ರಾಸವಾಗಿದ್ದ ಸಂಸತ್ ಬಜೆಟ್ ಅಧಿವೇಶನ ಯಾವುದೇ ರೀತಿಯ ಫಲಪ್ರದ ಚರ್ಚೆ ಇಲ್ಲದೇ ಅಂತ್ಯವಾಗಿದ್ದು, ಹೆಚ್ಚು ಕಡಿಮೆ ಸಂಪೂರ್ಣವಾಗಿ ವ್ಯರ್ಥವಾಗಿದೆ. ಕಲಾಪ ವ್ಯರ್ಥಕ್ಕೆ ವಿರೋಧ ಪಕ್ಷಗಳೇ ಕಾರಣ ಎಂದು ಒಂದೆಡೆ ಬಿಜೆಪಿ ಆರೋಪಿ ಮಾಡುತ್ತಿದ್ದರೆ, ಮತ್ತೊಂದೆಡೆ ಆಡಳಿತಾರೂಢ ಪಕ್ಷವೇ ಕಾರಣ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪರಸ್ಪರ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿವೆ. 
ನಿನ್ನೆಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿದ್ದಂತೆಯೇ ಸದನದಿಂದ ಹೊರಗೆ ಬಂದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಮುಖಾಮುಖಿಯಾಗಿ ನಿಂತು ಪ್ರತಿಭಟನೆ ನಡೆಸಿದವು. 
ಪ್ರತಿಭಟನೆ ಹಾಗೂ ಗದ್ದಲದಿಂದ ಇಡೀ ಕಲಾಪವೇ ಬಲಿಯಾದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮಾತ್ರ ಮುಗಿಯಲೇ ಇಲ್ಲ. ಕಲಾಪ ವ್ಯರ್ಥವಾಗಲು ವಿರೋಧ ಪಕ್ಷಗಳೇ ಕರಾಣ ಎಂದು ಬಿಂಬಿಸುವ ಸಲುವಾಗಿ ಬಿಜೆಪಿ ಏ.12 ರಂದು ಉಪವಾಸ ಸತ್ಯಾಗ್ರ ನಡೆಸಲು ತೀರ್ಮಾನ ಕೈಗೊಂಡಿದೆ. ಪ್ರತಿಭಟನಾ ದಿನದಂದು ಬಿಜೆಪಿಯ ಎಲ್ಲಾ ಸಂಸದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವಿಭಜನಾತ್ಮಕ ಮತ್ತು ನಕಾರಾತ್ಮಕ ರಾಜಕೀಯವನ್ನು ಜನರ ಮುಂದಿಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 
ಇದರಂತೆ ಕಾಂಗ್ರೆಸ್ ಪಕ್ಷ ಕೂಡ ಏ.9 ರಂದು ದೇಶದಾದ್ಯಂತ ಉಪವಾಸ ಸತ್ಯಾಗ್ರ ಕೈಗೊಳ್ಳಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. 
ಎಲ್ಲಾ ಜಿಲ್ಲಾ ಹಾಗೂ ರಾಜ್ಯ ಕಚೇರಿಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆಂದು ಹೇಳಲಾಗುತ್ದತಿದೆ. 
ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿಭಟನೆ ನಡೆಸಿದ್ದರೆ, ಬ್ಯಾಂಕ್ ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಮತ್ತೊಂದೆಡೆ ಕಾವೇರಿ ನದಿ ನೀರು ಹಂಚಿಕೆ ವಿವಾಹಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಎಐಎಡಿಎಂಕೆ ಸಂಸದರು ಪ್ರತಿಭಟನೆ ನಡೆಸಿದರು. ಇದರ ಜೊತೆಗೆ ತಮಿಳುನಾಡು ಹಾಗೂ ಇತರೆಡೆಗಳಲ್ಲಿ ಪ್ರತಿಮೆಗಳ ಧ್ವಂಸ ಹಾಗೂ ಎಸ್'ಟಿ/ಎಸ್'ಸಿ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು, ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. 
ಈ ಬಾರಿಯ ಬಜೆಟ್ ಅಧಿವೇಶನದ ಚರ್ಚೆಗೆ ನಿಗದಿಯಾಗಿದ್ದ ಸಮಯ 250 ಗಂಟೆಯಾಗಿದ್ದು, ಈ ಅವಧಿಗೆ ಕೇಂದ್ರ ಸರ್ಕಾರ ರೂ.375 ಕೋಟಿ ವೆಚ್ಚ ಮಾಡಿತ್ತು. ಅಂದರೆ, ಅಧಿವೇಶನದ ವೇಳೆ ಸಂಸದರ ಎಲ್ಲಾ ಖರ್ಚು ವೆಚ್ಚಗಳನ್ನು ಸೇರಿಸಿ ಪ್ರತಿ ನಿಮಿಷಕ್ಕೆ ರೂ.2.5 ಲಕ್ಷ ಗಳಂತೆ ಹಣವನ್ನು ಮೀಸಲಿಡಲಾಗಿತ್ತು. ಕಲಾಪ ನಡೆಯಲಿ ಅಥವಾ ನಡಯೆದೇ ಇದ್ದರೂ ಈ ಹಣ ಖರ್ಚಾಗುತ್ತದೆ. ಹೀಗಾಗಿ ಎನ್'ಡಿಎ ಪಕ್ಷದ ಸಂಸದರು ಜನರ ಹಣವನ್ನು ವ್ಯರ್ಥ ಮಾಡುವುದಿಲ್ಲ ಎಂದು ಬಿಂಬಿಸುವ ಸಲುವಾಗಿ ಬಜೆಟ್ ಅಧಿವೇಶನದ ಅವಧಿಯ ಸಂಪೂರ್ಣ ವೇತನವನ್ನು ನಿರಾಕರಿಸುವುದಾಗಿ ಘೋಷಣೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com