ಬಲಿಯಾ; ಉನ್ನಾವೋ ಅತ್ಯಾಚಾರ ಸಂತ್ರಸ್ತ ಯುವತಿ ಈ ಹಿಂದೆ ಕೂಡ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಳು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಪ್ರಸ್ತುತ ಬಿಜೆಪಿ ಶಾಸಕರ ವಿರುದ್ಧ ಆರೋಪ ಮಾಡುತ್ತಿರುವ ಇದೇ ಯುವತಿ ಈ ಹಿಂದೆ ಕೂಡ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು, ಆ ವ್ಯಕ್ತಿ 6 ತಿಂಗಳ ಕಾಲ ಜೈಲಿನಲ್ಲಿದ್ದ ಎಂಬುದನ್ನು ನಾನು ಕೇಳಿದ್ದೇನೆಂದು ಹೇಳಿದ್ದಾರೆ.
ಒಂದು ವೇಳೆ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರದ್ದು ತಪ್ಪಿದೆ ಎಂದು ಸಾಬೀತಾಗಿದ್ದೇ ಆದರೆ, ಅವರಿಗೆ ಶಿಕ್ಷೆಯಾಗಬೇಕು. ಶಾಸಕ ಹಾಗೂ ಆರೋಪ ಮಾಡಿದ ಯುವತಿಯನ್ನು ನಾರ್ಕೊಟಿಕ್ಸ್ ಪರೀಕ್ಷೆಗೊಳಪಡಿಸಿದರೆ, ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ.