ಕೇರಳ ಪ್ರವಾಹ: ಸಾವಿನ ಸಂಖ್ಯೆ 29ಕ್ಕೆ ಏರಿಕೆ, 54 ಸಾವಿರ ಜನ ನಿರಾಶ್ರಿತರು, ಸಿಎಂ ವೈಮಾನಿಕ ಸಮೀಕ್ಷೆ

ಅಬ್ಬರಿಸುತ್ತಿರುವ ಮುಂಗಾರು ಮಳೆಗೆ ತತ್ತರಿಸಿರುವ ದೇವರನಾಡು ಕೇರಳದಲ್ಲಿ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು...
ಕೇರಳದಲ್ಲಿ ಪ್ರವಾಹ
ಕೇರಳದಲ್ಲಿ ಪ್ರವಾಹ
ತಿರುವನಂತಪುರ: ಅಬ್ಬರಿಸುತ್ತಿರುವ ಮುಂಗಾರು ಮಳೆಗೆ ತತ್ತರಿಸಿರುವ ದೇವರನಾಡು ಕೇರಳದಲ್ಲಿ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದೊಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಕಾರಣ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿವಿಧ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಅಲ್ಲದೆ ಕೇರಳದಾದ್ಯಂತ ಸುಮಾರು 54,000 ಮಂದಿ ಮನೆಮಠ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಪಿಣರಾಯಿ ವಿಜಯನ್ ರಿಂದ ವೈಮಾನಿಕ ಸಮೀಕ್ಷೆ
ಪ್ರವಾಹ ಪೀಡಿತ ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರು ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ವಿಜಯನ್ ಅವರಿಗೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಇನ್ನು ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ, ಸೇತುವೆಗಳು ಕೊಚ್ಚಿ ಹೋಗಿರುವುದಲ್ಲದೇ ಪ್ರಾಕೃತಿಕ ವಿಕೋಪದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಭಾರೀ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ಅಲಪುಳ, ಎರ್ನಾಕುಲಂ, ಕೊಟ್ಟಾಯಂ, ಮಲಪ್ಪುರಂ, ಕಲ್ಲಿಕೋಟೆ ಮತ್ತು ಪಾಲಕ್ಕಾಡ್ ನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು ಆಗಸ್ಚ್ 14ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸೇನೆಯ ಐದು ತಂಡಗಳು ಮತ್ತು ಎನ್ ಡಿಆರ್ ಎಫ್ 7 ತಂಜಗಳನ್ನು ಪರಿಹಾರ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಇದೇ ವೇಳೆ, ಭಾರತೀಯ ನೌಕಾಸೇನೆಯ ದಕ್ಷಿಣ ಕಮಾಂಡ್‌ ಪಡೆ ಆಪರೇಷನ್‌ ಮದದ್‌ ಆರಂಭಿಸಿದ್ದು ಸಂತ್ರಸ್ತರ ರಕ್ಷಣೆಗೆ ನಿಂತಿದೆ.
ಮುನ್ನಾರ್ ಪ್ರವಾಸಿಗರ ರಕ್ಷಿಸಿದ ಸೇನೆ
ಇನ್ನು ಖ್ಯಾತ ಪ್ರವಾಸಿಗರ ಆಕರ್ಷಣೀಯ ಪ್ರವಾಸಿ ತಾಣ ಮುನ್ನಾರ್ ನಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 54 ಪ್ರವಾಸಿಗರನ್ನು ಸೇನೆ ರಕ್ಷಣೆ ಮಾಡಿದೆ. ಇನ್ನೂ ಸಾಕಷ್ಟು ಪ್ರವಾಸಿಗರು ರೆಸಾರ್ಟ್ ನಲ್ಲಿ ಇರುವ ಕುರಿತು ಮಾಹಿತಿ ಇದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ಸಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೆರೆ ಪರಿಸ್ಥಿತಿಯ ವಾಸ್ತವಿಕ ಸ್ಥಿತಿಯನ್ನು ವೀಕ್ಷಿಸಿದ್ದಾರೆ. ಸಶಸ್ತ್ರ ಪಡೆಯ ಎಲ್ಲ ನಾಲ್ಕು ಅಂಗಗಳಲ್ಲದೇ, ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡಗಳೂ ಕಾರ್ಯಾಚರಣೆಗೆ ಇಳಿದಿವೆ. 
40 ವರ್ಷಗಳ ಬಳಿಕ ಇಡುಕ್ಕಿ ಡ್ಯಾಂನ ಎಲ್ಲ ಐದೂ ಗೇಟ್ ಗಳು ತೆರೆದು ನೀರು ಹೊರಕ್ಕೆ
ಭಾರೀ ಮಳೆ ಕಾರಣ ರಾಜ್ಯದ ನದಿಗಳು ತುಂಬಿ ಹರಿಯುತ್ತಿದ್ದು 24 ಅಣೆಕಟ್ಟೆಗಳ ಫ್ಲಡ್‌ ಗೇಟ್‌ಗಳನ್ನು ತೆರೆಯಲಾಗಿದೆ. ಪ್ರಮುಖವಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ದಕ್ಷಿಣ ಏಷ್ಯಾದ ಅತೀ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಇಡುಕ್ಕಿ ಡ್ಯಾಂ ಎಲ್ಲಾ ಐದೂ ಗೇಟ್ ಗಳನ್ನು ತೆರೆದು ನೀರು ಹೊರ ಬಿಡಲಾಗುತ್ತಿದೆ. 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಡುಕ್ಕಿ ಡ್ಯಾಂ ನ ಎಲ್ಲ ಐದೂ ಗೇಟ್ ಗಳನ್ನು ತೆರೆದು ನೀರು ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇಡುಕ್ಕಿಯಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com